ಕೆಂಪು ಮಣ್ಣಿನ ನೆಲ
ಅರಳುವ ಮುನ್ನ ಇಬ್ಬನಿ ಕಾಣುವ ಮೊಗ್ಗುಗಳು. ಜಗತ್ತು ತಲೆ ಎತ್ತುವುದರೊಳಗೆ ಚಿಲಿಪಿಲಿಗುಟ್ಟುವ ಹಕ್ಕಿಗಳು. ಆಗೀಗಲೋ ರಂಗೇರಲು ಸಿದ್ಧವಾಗುತ್ತಿರುವ ಆಕಾಶ. ನಿಶಬ್ದಕ್ಕೂ ಶಬ್ದವೆನಿಸುವಷ್ಟು ನಿಶ್ಚಲವಾಗಿ ನಿಂತಿರುವ ಕಾಡು ಮರಗಳು. ಅವುಗಳ ಮೂಲೆಯಲ್ಲೊಂದು ಗುಡಿಸಲು. ಅದು ಊರ ಹೊರಗಿರುವ ಒಬ್ಬಂಟಿ ಗುಡಿಸಲು. ಪ್ರಾಯದ ಹುಡುಗ ಬೊಮ್ಮ ಇರುವ ಜಾಗ. ಬಾಲ್ಯದಲ್ಲಿ ತಾಯಿಯೊಬ್ಬಳು ಇದ್ದಳು. ಬಿಟ್ಟರೆ ನರ-ಮನುಷ್ಯರಾರೂ ಆಕಡೆ ಸುಳಿಯುತ್ತಿರಲಿಲ್ಲ. ಆಗೀಗ ಮಾತ್ರ ನಾಲ್ಕಾರು ಜನ ಸಿಂಗರಿಸಿದ ಹೆಣವನ್ನು ಮರದ ಕೆಳಗೆ ಕೂರಿಸಿ ಹೋಗಲು ಬರುತ್ತಿದ್ದರು. ಬಂದಾಗ ಧೂಪದ ಹೊಗೆಯಾಡಿಸಿದ ಎರಡು ನಿಮಿಷ ಕಣ್ಣೀರು ಸುರಿಸುತ್ತಿದ್ದರು. ಮಣ್ಣಿನ ಪಾತ್ರೆಯಲ್ಲಿ ಸತ್ತವರ ಮುಂದೆ ಕುಡಿಯಲೆಂದು ನೀರನ್ನೋ-ಪಾನೀಯವನ್ನೋ ಇಟ್ಟು, ತಿನ್ನಲೆಂದು ಹಣ್ಣುಗಳನ್ನು ಮಡಗಿ ವಾಪಸ್ಸಾಗುತ್ತಿದ್ದರು. ಪ್ರತಿದಿನ ಸೂರ್ಯನೇ ಉದಯಿಸಿದರೂ ಅಲ್ಲಿನ ಜನರಲ್ಲಿ ಮನುಷ್ಯತ್ವ ಮಾತ್ರ ಹುಟ್ಟಿರಲಿಲ್ಲ. ಲೆಕ್ಕಕ್ಕೆ ಸಾವಿರಾರು ಜನರ ಊರಾದರೂ ಮಾನವೀಯತೆ ಇರುವವರ ಸಂಖ್ಯೆ ಸೊನ್ನೆಯನ್ನು ಮೀರಿರಲಿಲ್ಲ. ಸುಖದ ಅರಿವಿಲ್ಲದೆಯೇ ಅದರ ಭ್ರಾಂತಿಯಲ್ಲಿ ಮುಳುಗಿದ್ದರು. ಇಂತಹ ಊರಿನ ಜನರಲ್ಲಿ ಮಾರ ಒಬ್ಬ. ಬಡತನದಲ್ಲಿ ಬರುವ ಹಸಿವಿನ ಖಾಯಿಲೆಯನ್ನು ನೀಗಿಸಲು ಮಾರ ದುಡಿದೂ ದುಡಿದು ಒಂದು ದಿನ ಮತ್ತೆಂದೂ ಇಲ್ಲದವನಾಗಿ ಮಲಗಿಬಿಟ್ಟ. ಆತನ ಹೆಂಡತಿ ದಾಕ್ಷಿ.ಆಕೆ ಮುಂದಿನ ದಿನದೂಗಲು ರಾತ್ರಿಯ ಹೊತ್ತು ಧನಿಕನ ...