ಕೆಂಪು ಮಣ್ಣಿನ ನೆಲ

ಅರಳುವ ಮುನ್ನ ಇಬ್ಬನಿ ಕಾಣುವ ಮೊಗ್ಗುಗಳು. ಜಗತ್ತು ತಲೆ ಎತ್ತುವುದರೊಳಗೆ ಚಿಲಿಪಿಲಿಗುಟ್ಟುವ ಹಕ್ಕಿಗಳು. ಆಗೀಗಲೋ ರಂಗೇರಲು ಸಿದ್ಧವಾಗುತ್ತಿರುವ ಆಕಾಶ. ನಿಶಬ್ದಕ್ಕೂ ಶಬ್ದವೆನಿಸುವಷ್ಟು ನಿಶ್ಚಲವಾಗಿ ನಿಂತಿರುವ ಕಾಡು ಮರಗಳು. ಅವುಗಳ ಮೂಲೆಯಲ್ಲೊಂದು ಗುಡಿಸಲು.

ಅದು ಊರ ಹೊರಗಿರುವ ಒಬ್ಬಂಟಿ ಗುಡಿಸಲು. ಪ್ರಾಯದ ಹುಡುಗ ಬೊಮ್ಮ ಇರುವ ಜಾಗ. ಬಾಲ್ಯದಲ್ಲಿ ತಾಯಿಯೊಬ್ಬಳು ಇದ್ದಳು. ಬಿಟ್ಟರೆ ನರ-ಮನುಷ್ಯರಾರೂ ಆಕಡೆ ಸುಳಿಯುತ್ತಿರಲಿಲ್ಲ. ಆಗೀಗ ಮಾತ್ರ ನಾಲ್ಕಾರು ಜನ ಸಿಂಗರಿಸಿದ  ಹೆಣವನ್ನು ಮರದ ಕೆಳಗೆ ಕೂರಿಸಿ ಹೋಗಲು ಬರುತ್ತಿದ್ದರು. ಬಂದಾಗ ಧೂಪದ ಹೊಗೆಯಾಡಿಸಿದ ಎರಡು ನಿಮಿಷ ಕಣ್ಣೀರು ಸುರಿಸುತ್ತಿದ್ದರು. ಮಣ್ಣಿನ ಪಾತ್ರೆಯಲ್ಲಿ ಸತ್ತವರ ಮುಂದೆ ಕುಡಿಯಲೆಂದು ನೀರನ್ನೋ-ಪಾನೀಯವನ್ನೋ ಇಟ್ಟು, ತಿನ್ನಲೆಂದು ಹಣ್ಣುಗಳನ್ನು ಮಡಗಿ ವಾಪಸ್ಸಾಗುತ್ತಿದ್ದರು.

ಪ್ರತಿದಿನ ಸೂರ್ಯನೇ ಉದಯಿಸಿದರೂ ಅಲ್ಲಿನ ಜನರಲ್ಲಿ ಮನುಷ್ಯತ್ವ ಮಾತ್ರ ಹುಟ್ಟಿರಲಿಲ್ಲ. ಲೆಕ್ಕಕ್ಕೆ ಸಾವಿರಾರು ಜನರ ಊರಾದರೂ ಮಾನವೀಯತೆ ಇರುವವರ ಸಂಖ್ಯೆ ಸೊನ್ನೆಯನ್ನು ಮೀರಿರಲಿಲ್ಲ. ಸುಖದ ಅರಿವಿಲ್ಲದೆಯೇ ಅದರ ಭ್ರಾಂತಿಯಲ್ಲಿ ಮುಳುಗಿದ್ದರು. ಇಂತಹ ಊರಿನ ಜನರಲ್ಲಿ ಮಾರ ಒಬ್ಬ.

 ಬಡತನದಲ್ಲಿ ಬರುವ ಹಸಿವಿನ ಖಾಯಿಲೆಯನ್ನು ನೀಗಿಸಲು ಮಾರ ದುಡಿದೂ ದುಡಿದು ಒಂದು ದಿನ ಮತ್ತೆಂದೂ ಇಲ್ಲದವನಾಗಿ ಮಲಗಿಬಿಟ್ಟ. ಆತನ ಹೆಂಡತಿ ದಾಕ್ಷಿ.ಆಕೆ ಮುಂದಿನ ದಿನದೂಗಲು ರಾತ್ರಿಯ ಹೊತ್ತು ಧನಿಕನ ಬರುವಿಕೆಗಾಗಿ ಮನೆಯ ಬಾಗಿಲನ್ನು ತೆರೆದಿಡಲು ಶುರುವಿಟ್ಟಳು ‌. ಗಂಡ ಸತ್ತು ಎರಡು-ಮೂರು ವರ್ಷಗಳಾದ ಮೇಲೆ ಇವಳ ಹೊಟ್ಟೆಯಲ್ಲಿರುವ ಜೀವಕ್ಕೆ ನಾಲ್ಕು ತಿಂಗಳು ತುಂಬಿತ್ತು. ಹಸಿವಿನಿಂದ ಹೊಟ್ಟೆ ತುಂಬಿಸಿಕೊಳ್ಳುವ ಆತುರದಲ್ಲಿ  ಬಸಿರೂ ತುಂಬಿ ಹೋಗಿತ್ತು... ಕರಳು ತಿನ್ನುವ ಹಸಿವಿನ ಮುಂದೆ ಇವಳಿಗೇನು ತಿಳಿಯದು.ಬೀಜ ಬಿತ್ತಿದ ಧನಿಕ ಫಸಲಿಗಾಗಿ ಮುಂದೆ ಬರಲಿಲ್ಲ. ಇವಳಿಗೆ ಯಾರದ್ದು ಎಂದೂ ತಿಳಿದಿಲ್ಲ. ಪಂಚಾಯಿತಿ ನಡೆದು ಆಕೆಯ ತಲೆ ಬೋಳಿಸಿದರು.ಕಾಣದ ಜೀವದ ಬಗ್ಗೆ ಚಿಂತಿಸುತ್ತಿರುವ ಆಕೆ ಯಾರನ್ನೂ ಶಪಿಸಲಿಲ್ಲ. ಆಕ್ಷಣ ಆಕೆಯ ಮೌನ, ಹಿಂದೆ ಮನೆ ಬಾಗಿಲು ದಾಟಿದವರನ್ನು ಭಯಗೊಳಿಸುತ್ತಿತ್ತು. ಆದರೆ ರಾತ್ರಿಯಾಗುವ ಗಂಡಸುತನದ ನೆನಪು ತಾವೇ ಸುಖಿಸಿದ ಸ್ತ್ರೀಯ ಕಷ್ಟಕ್ಕೆ ಧ್ವನಿಯಾಗಲು  ಬರಲಿಲ್ಲ. ನಾಲ್ಕು ತಿಂಗಳ ಗರ್ಭಿಣಿಯನ್ನು ಐದು ತುಂಬುವುದರೊಳಗೆ ಕಾಡಿಗಟ್ಟಿದರು. ಜಗವ ಕಾಣದ ಜೀವದೊಂದಿಗೆ ಏಕಾಂಗಿಯಾಗಿ ಹೊರಟಳು. ಕಾಳು ಎಂಬ ‌‌‌ಕರಿಯ ನಾಯಿಮರಿಯೊಂದು ಅವಳನ್ನು ಹಿಂಬಾಲಿಸಿ ಹೊರಟಿತ್ತು.

ಹಿಂದಿನ ಬದುಕಿನ ಪಾಠವೋ, ಜೀವದ ಆಸೆಯ ಹೋರಾಟವೋ ಅಂತೂ ಮಗು ಜಗತ್ತಿನ ಬೆಳಕನ್ನು ಕಂಡಿತು. ನಾಲ್ಕು ಹೆಜ್ಜೆ ನಡೆಯಲು ಶುರು ಮಾಡಿದಾಗ ತಾಯಿಗೆ ಪ್ರೀತಿಯ ಬೊಮ್ಮನಾಯಿತು. ಕಾಲದ ಊಟಕ್ಕೆ ತಡೆಯುಂಟೇ? ಅದರ ಹೊಟ್ಟೆಯು ಯಾವಾಗಲೂ ಬರಿದೆ....!! ಬೊಮ್ಮ ನಿಗೆ ಹತ್ತು ವರ್ಷವಾದಾಗ ದಾಕ್ಷಿಯೂ ಕಾಲನ ಪಾಲಾಗಿ ಒರಗಿಕೊಂಡಳು.

ಕಾಡಿನಲ್ಲೇ ಇರುವ ಬೊಮ್ಮನಿಗೆ ಕಾಡುಪ್ರಾಣಿಗಳ ಭಯವೇ? ಇಲ್ಲ. ಚಿಕ್ಕಪುಟ್ಟ ಪ್ರಾಣಿಗಳು, ಕಾಡು ‌‌‌‌‌‌‌‌‌‌‌‌ಹಣ್ಣುಗಳು ಆತನ ಆಹಾರ. ಕೆಲವೊಮ್ಮೆ ಹೆಣದ ಮುಂದಿಟ್ಟು ಹೋಗುವ ಫಲಗಳು ರಸಾಯನಗಳ ಭೂರಿಭೋಜನ ಬೊಮ್ಮನಿಗಾದರೆ ಹೆಣದ ಪಾಲು ಕಾಳುವಿನದ್ದು.. ಹೀಗೆ ಅವರಿಬ್ಬರ ಹೊಟ್ಟೆಗೆ ಯಾವ ಮೋಸವು ಆಗಿದ್ದಿಲ್ಲ. ಒಂದಲ್ಲದಿದ್ದರೆ ಮತ್ತೊಂದು ದಾರಿ ಸಿಗುತ್ತಿತ್ತು. ಕಾಳುವಿಗೆ ಬೇಸರವಾದರೆ ಊರೊಳಗೆ ಸವಾರಿ ಮಾಡುತ್ತಿದ್ದ. ನಾಯಿಯ ಪ್ರವೇಶಕ್ಕಿರುವ ಸಹಮತ ಬೊಮ್ಮನ ಆಗಮನಕ್ಕಿರಲಿಲ್ಲ.

ಒಮ್ಮೆ ಊರೊಳಗೆ ಮಧ್ಯವಯಸ್ಕ ಮಹಿಳೆಯ ಸಾವಾಯಿತು. ಮರದ ಕೆಳಗೆ ಕೂರಿಸಿ ಹೋಗಲು ಅವಳನ್ನು ಸಿಂಗರಿಸಿ ಹೊತ್ತು ತಂದರು. ಬೊಮ್ಮ ಅವಳನ್ನು ನೋಡಿ ದಾಕ್ಷಿಯ ನೆನಪಾಗಿ ಭಾವುಕನಾದ. ಹೊತ್ತು ತಂದವರು ಅರೆಕ್ಷಣ ಕನಿಕರಭಾವದ ನಾಟಕವಾಡಿ ಹೊರಟುಹೋದರು.

ಊರಿನ ಗಣ್ಯರೆಲ್ಲ ಸಭೆ ಸೇರಿದರು. ಸ್ವಲ್ಪ ದಿನಗಳ ನಂತರ ಊರಿನಲ್ಲಿ ಜಾತ್ರೆ ಮಾಡುವುದೆಂದು ನಿಶ್ಚಯ ಮಾಡಿದರು. ಅದರೊಟ್ಟಿಗೆ ಊರ ಕ್ಷೇಮಕ್ಕಾಗಿ ನರಬಲಿ ಕೊಡುವ ಹೀನ ಶಪಥ ಕೈಗೊಂಡರು. ನೆರೆದಿದ್ದ ಹಿರಿತಲೆಗಳಿಗೆ ಚಿಂತೆಯಾಯಿತು ಶಪಥದಿಂದಲ್ಲ,ಯಾರನ್ನು ಬಲಿಕೊಡುವುದೆಂದು. ಯೋಚಿಸತೊಡಗಿದರು. ಅವರ ಮೊಂಡು ತಲೆಗೆ ಏನು ತೋರುತ್ತೆ ಬೂದಿ. ರಾಕ್ಷಸರ ಕಣ್ಣು ಬೀಳುವುದು ಅಮಾಯಕರ ಮೇಲೆಯೇ ತಾನೆ? ಇಲ್ಲೂ ಹಾಗೆಯೇ ಆಯಿತು. ಇಷ್ಟು ದಿನ ನಿಶ್ಚಿಂತನಾಗಿ, ಸ್ವತಂತ್ರವಾಗಿ, ದೂರದಲ್ಲಿ ಊರಹೊರಗೆ , ಯಾರಿಗೂ ಬೇಡದವನಾಗಿ ಬದುಕುತ್ತಿದ್ದ ಬೊಮ್ಮನ ಮೇಲೆ ಕ್ರೂರ ದೃಷ್ಟಿ ಹರಿಯಿತು. ಅವನನ್ನು ಕಂಡರೆ ಅಸಹ್ಯ ಪಡುತ್ತಿದ್ದ ಜೀವಗಳು ಇವತ್ತು ಆತನನ್ನು ಊರಿನ ಮಧ್ಯದಲ್ಲಿ ತಂದು ಮೆರವಣಿಗೆ ಮಾಡಲು ಕಾತರಿಸುತ್ತಿದ್ದರು.

ಹೆಣ ಸಿಂಗರಿಸಿಕೊಂಡು ಬರುತ್ತಿದ್ದ ಜನ ಇವತ್ತು ಬರಿಗೈಲಿ ಬಂದರು. ಹನ್ನೆರಡರ ಪ್ರಾಯದ ಪುಟ್ಟ ಮುಗ್ಧ ಬಾಲಕ ಆತ.ಸಾವನ್ನು ಸ್ವಾಗತಿಸಲು ಸ್ನಾನವನ್ನೇ ಕಾಣದವನನ್ನು ಸಿಂಗರಿಸ ತೊಡಗಿದರು. ತೊಡಿಸಿದ ಶುಭ್ರ ಅಂಗಿಯನ್ನು ನೋಡಿ ಸಂತೋಷಗೊಂಡ ಆತ ಕುಣಿಯತೊಡಗಿದ.ಪಾಪ ತನ್ನ ಶವಯಾತ್ರೆಯೆಡೆಗೆ ತಾನೇ ಸಂಭ್ರಮದ ಹೆಜ್ಜೆ ಹಾಕುತ್ತಿದ್ದ. ಸಿಂಗರಿಸುವ ಮುಖಗಳ ಹಿಂದಿರುವ ಕೊಳಕು ಯೋಚನೆಗಳು ಆತನಿಗೆ ತಿಳಿದಿರಲಿಲ್ಲ. ತನ್ನ ಪುಟ್ಟ, ಸಮೃದ್ಧ ಸಾಮ್ರಾಜ್ಯವನ್ನು ಬಿಟ್ಟು ಅವರೊಡನೆ ನಗುನಗುತ್ತಾ ಹೊರಟ.
ಕರಿ ನಾಯಿ ಕಾಳು ಗುಡಿಸಿಲಿನಲ್ಲಿ ಉಳಿದಿತ್ತು.

ಬೊಮ್ಮನ ಕೊನೆಯ ಸವಾರಿ ಬೆಳಿಗ್ಗೆಯೇ ಗುಡಿಸಲಿನಿಂದ ಹೊರಟು ಹೋಗಿತ್ತು. ಮಧ್ಯಾಹ್ನದ ವೇಳೆಗೆ ಪೂರ್ತಿ ಊರ ಮೆರವಣಿಗೆ ಮುಗಿದಿತ್ತು. ಸಂಜೆ ಜಾತ್ರೆಯನ್ನು ಮುಗಿಸಿ ವಧಾಸ್ಥಾನವನ್ನು ಪ್ರವೇಶಿಸಿತ್ತು. ಆತನಿಗೆ ಬಲಿಯ ಹೆಸರಿನಲ್ಲಿ ತನ್ನ ಸಾವಿನ ಕಲ್ಪನೆ ಇಲ್ಲ. ಅವನ ಮುಖದಲ್ಲಿ ಭಯವೇ ತೋರುತ್ತಿರಲಿಲ್ಲ. ಬದಲಾಗಿ ಜನ ತೋರಿಸುತ್ತಿರುವ ಕಪಟ ಪ್ರೀತಿಯಲ್ಲಿ ನಿಚ್ಚಳ ನಂಬಿಕೆ ಇತ್ತು. ಕಟುಕ ಬೀಸಿದ ಕತ್ತಿಗೆ ಎಳೆಯ ಮಗುವಿನ ತಲೆ ಹೂವಿನಂತೆ ಹಾರಿಬಿತ್ತು. ಮುಂಡದಿಂದ ಒಂದೆಡೆ ರಕ್ತ ಹರಿಯುತ್ತಿದ್ದರೆ ತೆರೆದ ಕಣ್ಣುಗಳಲ್ಲಿ ಸಂತೋಷ ಇನ್ನೂ ಜಿನುಗುತ್ತಿತ್ತು. ಆತನ ಸಾವಿಗೆ ದುಃಖಪಡುವ ಒಂದು ಹೃದಯವು ಅಲ್ಲಿಯ ಜಾತ್ರೆಯಲ್ಲಿರಲಿಲ್ಲ. ಆದರೆ ದೂರದ ಗುಡಿಸಿಲಿನಲ್ಲಿ ಇರುವ ಕಾಳು ನಾಯಿಯು ಕುಂಯ್ ಗುಟ್ಟು ಬೊಮ್ಮನೊಡನೆ ಭೂಮಿಯ ಯಾತ್ರೆಯನ್ನು ಮುಗಿಸಿತ್ತು. ಬಲಿಯ ಹೆಸರಿನಲ್ಲಿ ಬೊಮ್ಮನ ಕೊಲೆ ನಡೆಯಿತು. ಇದನ್ನು ನೋಡುತ್ತಿದ್ದ ಪಂಚಾಯಿತಿಯವರ, ಹಿರಿತಲೆಗಳ, ಜನಗಳ ಕೈಗಳು ಸಂತೋಷದಿಂದ ಚಪ್ಪಾಳೆ ತಟ್ಟುತ್ತಿದ್ದವು.

ಸಾವನ್ನು ಸಂಭ್ರಮಿಸುತ್ತಿರುವ ಮನುಷ್ಯರ ಕೊಳಕು ಮನಸುಗಳ ನಡುವೆ ಸಾವಿನಲ್ಲೂ ಜೊತೆಯಾಗಿರುವ ಪ್ರಾಣಿ ಜೀವ ಲೇಸಲ್ಲವೇ?.

Comments

Popular posts from this blog

ಅನಿಶ್ಚಿತ

ಸಮಯ ಸಮಸ್ಯೆ?

ನಗುವರಿಯದ ಮುಖ..

ಆದ್ಯತೆ ( priority )

ಅಮ್ಮ

ಮರುಳು ಜೀವನ

ಮನು ಮತ್ತು ತಾತ

ಚಂಚಲ