ನಗುವರಿಯದ ಮುಖ..

ಹೊಸ ಜಗತ್ತಿನಲ್ಲಿ ನವನವೀನ ಶೋಕಿಗಳು ಹೆಚ್ಚಾಗುತ್ತಿವೆಯೇ ವಿನಃ ಧರ್ಮ ಹಾಗೂ ಸಂಸ್ಕೃತಿಯ ಬಗೆಗಿನ ನಿಷ್ಠೆಯಲ್ಲ. ಗಿಡ ಬೆಳೆಸಬೇಕಾಗಿದ ಕೈಗಳು ನೀರುಣಿಸಿ ಪೋಷಿಸುವುದನ್ನು ಮರೆತಿವೆಯೋ ಅಥವಾ ಎಲ್ಲವೂ ಅತಿಯಾಗಿ ಗಿಡಕ್ಕೆ ಕೊಳೆ ಬರುತ್ತಿದೆಯೋ ಎಂದು ತಿಳಿಯದು. ನದಿಯಾಗಬೇಕಾದ ನೀರಿನ ಚಿಲುಮೆಯನ್ನು ತಡೆಯಲೆತ್ನಿಸುವುದು ಮತ್ತು ಕಲುಷಿತಗೊಳಿಸುವುದು ಸುತ್ತಲಿನ ಎಲ್ಲರಿಗೂ ಅಪಾಯ ತರುವಂತದ್ದು. ಹಾಗೆಯೇ ಮನಸ್ಸು ಕೂಡ ಹುಟ್ಟಿನಲ್ಲಿ ಶುದ್ಧವಾಗಿದ್ದು ಪ್ರಪಂಚದ ಸಂಪರ್ಕಕ್ಕೆ ಬಂದು ಬಾಲ್ಯದಿಂದ ಸಂಸ್ಕಾರ ಮರೆತು ಅಥವಾ ಸಿಗದೇ ಕೊಚ್ಚೆಗೆ ಸಮವಾಗಿ ಬೇಡ ಬೇಕುಗಳ ಮಿಶ್ರಣವಾಗಿ ನಾರುತ್ತಾ ದುಷ್ಪರಿಣಾಮವನ್ನೇ ಉಂಟುಮಾಡುತ್ತದೆ.

ಜಗತ್ತಿನ ಭವಿಷ್ಯವಿರುವುದು ಇಂದು ಬೆಳೆಯುತ್ತಿರುವ ಹಾಗೂ ಅವರನ್ನು ಬೆಳೆಸುತ್ತಿರುವ ಮನಸ್ಸುಗಳ ಅಡಿಪಾಯದ ಮೇಲೆ. ತಿದ್ದುವವರು ತಪ್ಪನ್ನು ತಿದ್ದಿದರೆ ತಾನೇ ತಪ್ಪಾದದ್ದು ಸರಿಯಾಗುವುದು? ಬೇಕೆಂದೇ ಸರಿಯನ್ನು ತಪ್ಪೆಂದು ತಿದ್ದುವ ಮನಸ್ಸುಗಳು ಇರಬಾರದಷ್ಟೇ.... ಶಿಲ್ಪಿಯು ಜಾಗರೂಕತೆ ವಹಿಸಿದಷ್ಟು ಮತ್ತು ನಿಪುಣನಾದಷ್ಟು ಶಿಲ್ಪವು ಸುಂದರಗೊಳ್ಳುವುದು; ಶಿಲ್ಪದ ಸೌಂದರ್ಯ ಕೆಡುವುದು ಅಜಾಗರೂಕತೆಯಿಂದಾಗಿರುತ್ತದೆ.

ಪ್ರತಿದಿನದ ನಾಳೆಯ ಸಂತೋಷದ ಬಗ್ಗೆ ಚಿಂತಿಸುವ ನಾವು ದೊರೆತ ಹಾಗೂ ಪಡೆದುಕೊಳ್ಳಬೇಕಾದ ಸಂಸ್ಕಾರಗಳ  ಮತ್ತು ಸಾಗಬೇಕಾದ ಧರ್ಮದ ಮಾರ್ಗಗಳ ಬಗ್ಗೆ ಚಿಂತಿಸಲಾರೆವು. ನಗುವರಿಯದ ಮುಖಕ್ಕೆ ಕಾರಣವಾಗಿರುವಂತದ್ದು ಧರ್ಮ ಮತ್ತು ಸಂಸ್ಕಾರಗಳ ಅಭಾವವು.

ನಿರಂತರ ಖುಷಿಯು ದೊರೆಯಲೆಂದು ಸದಾ ಬಯಸುವ ನಾವು ದುಃಖದಿಂದ ಉಂಟಾಗುವ ಅನುಭವ ಮತ್ತು ಉತ್ತಮ ಸಂಸ್ಕಾರಗಳ ಬಗ್ಗೆ ಏಕೆ ಯೋಚಿಸುವುದಿಲ್ಲ? ಶಾಶ್ವತವಾದ ಆನಂದವೊಂದು ಪ್ರಾಪ್ತವಾದ ಮೇಲೆ ಮಿಕ್ಕೆಲ್ಲವೂ ಅನಿತ್ಯ ಸುಖವೇ ಆಗುತ್ತವೆ. ಅದು ದೊರೆಯಲು ಕಾರಣವಾದ ಜೀವನದ ಸುಖ ಹಾಗೂ ದುಃಖಗಳಿಂದುಂಟಾದ ಉತ್ತಮ ಸಂಸ್ಕಾರ ಮತ್ತು ಧರ್ಮವನ್ನನುಸರಿಸುವುದನ್ನು ಮರೆಯಬಾರದು.

ಕಾಲಚಕ್ರದಲ್ಲಿ ದುಃಖದಿಂದಾದ ಸಂಸ್ಕಾರ ಸುಖಕ್ಕೆ ಕಾರಣವಾದರೆ ಸುಖ ದುಃಖಗಳೆರಡನ್ನು ಜೀವನದಲ್ಲಿ ಸಮಾನವಾಗಿ ಸ್ವೀಕರಿಸುವುದು ಜೀವದ ಧರ್ಮವಾಗಬೇಕು.

Comments

Popular posts from this blog

ಅನಿಶ್ಚಿತ

ಸಮಯ ಸಮಸ್ಯೆ?

ಆದ್ಯತೆ ( priority )

ಅಮ್ಮ

ಮರುಳು ಜೀವನ

ಕೆಂಪು ಮಣ್ಣಿನ ನೆಲ

ಮನು ಮತ್ತು ತಾತ

ಚಂಚಲ