ಆದ್ಯತೆ ( priority )

" ಸಮಯ ಬದಲಾದ ಹಾಗೆ ನಮ್ಮ ಆದ್ಯತೆ , ವ್ಯಕ್ತಿತ್ವ ಕೂಡ ಬದಲಾಗುತ್ತದೆ". 

ತುಂಬಾ ಆತ್ಮೀಯವಾಗಿರುವವರಿಂದ ಈ ಮಾತನ್ನು ಕೇಳಿ ಯೋಚಿಸುವಂತಾಯಿತು. ಮೇಲ್ನೋಟಕ್ಕೆ  ಇದು ಎಷ್ಟು ಸತ್ಯವಾಗಿದೆ ಎಂದೆನಿಸುವುದು ಸಹಜವೇ ಸರಿ.. ಈ ಮಾತಿನ ಬಗ್ಗೆ ಅಭಿಪ್ರಾಯ ಬರೆಯುತ್ತಿರುವೆ..

ನಾನೇನು  ಜೀವನವನ್ನು ನೋಡಿದವನೋ ಅಥವಾ ಬಹಳಷ್ಟು ಏರಿಳಿತದ ದಾರಿಯಲ್ಲಿ ನಡೆದವನೋ ಅಲ್ಲವೇ ಅಲ್ಲ...ಸಹಜವಾದ ತೊಂದರೆಗಳಿಂದ ಕೂಡಿದ ಸಾಮಾನ್ಯ ಬಾಳಿನವನು.. ಆದರೆ ಯೋಚನೆಗೆ,ಯೋಚಿಸುವುದಕ್ಕೆ ಅನುಭವವಾಗಬೇಕಿಲ್ಲ. ಯೋಚನೆಯಿಂದಾಗಿಯೇ ಎಲ್ಲವನ್ನೂ ಅರಿತುಕೊಳ್ಳಲು ಅವಕಾಶವಿದೆ.

ವಿಷಯಕ್ಕೆ ಬರೋಣ..

ನನ್ನ ಮೊದಲ ಪ್ರಶ್ನೆಯೇನೆಂದರೆ
                 ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಜೀವನದ ಎಲ್ಲಿಯವರೆಗೆ ಬದಲಾಯಿಸಿಕೊಳ್ಳುತ್ತಾ ಹೋಗಬಹುದು? ಸಮಯವಂತೂ ಪ್ರತಿಕ್ಷಣ ಬದಲಾಗುವುದೆಂದು ತಿಳಿದದ್ದೇ.....

             ನನ್ನ ಪ್ರಕಾರ ಸಮಯಕ್ಕೆ ತಕ್ಕಂತೆ ನಮ್ಮ ಆದ್ಯತೆಗಳಿಗೋಸ್ಕರ ನಮ್ಮನ್ನೇ ನಾವು ಬದಲಾಯಿಸಿಕೊಳ್ಳುತ್ತಾ ಹೋಗುವುದಕ್ಕಿಂತ, ಬಂದ ಸಮಯಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವುದನ್ನು ಕಲಿತುಕೊಳ್ಳಬೇಕು.. "ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರುಷ ಆಯಸ್ಸು" ಅಂತಾರಲ್ವಾ....

ತಿಳಿದಿದೆ... ಯಾವ್ಯಾವುದು ಸಾಧ್ಯಾಸಾಧ್ಯಗಳೆಂಬುದು. ಆದರೆ ನಮ್ಮ ಆದ್ಯತೆಯನ್ನು ಬದಲಾಯಿಸುತ್ತಾ ವ್ಯಕ್ತಿತ್ವವನ್ನೇ ಬದಲಾಯಿಸಿಕೊಳ್ಳುವುದು ಅನಿವಾರ್ಯವಲ್ಲ.. ಆದರೆ ಸಮಯಕ್ಕೆ ಹೊಂದಿಕೊಂಡು ನಡೆಯುವುದು ಅನಿವಾರ್ಯವೆಂದು ಗೋಚರಿಸುತ್ತದೆ.

            ನೆನಪಲ್ಲಿಡಬೇಕು.... ಪ್ರತಿಯೊಬ್ಬರಲ್ಲೂ ಸ್ವಂತವಾದ ಶ್ರೇಷ್ಠ ಚಾರಿತ್ರ್ಯವಿದೆ. ಪರಿಸ್ಥಿತಿಯ ಅಥವಾ ವ್ಯಕ್ತಿಗಳ ಪ್ರಭಾವಕ್ಕೊಳಗಾಗಿ ನಮ್ಮ ಚಾರಿತ್ರ್ಯವನ್ನು ನಾವು ಬದಲಾಯಿಸಿಕೊಳ್ಳುವುದು ನನ್ನ ಪ್ರಕಾರ ತಪ್ಪು. ಬದಲಾಗುತ್ತಾ ಹೋದರೆ ನಮ್ಮನ್ನೇ ನಾವು ಕಳೆದುಕೊಂಡು ನಮ್ಮ ಮೂಲವನ್ನೇ ಮರೆತುಬಡುವ ಪರಿಸ್ಥಿತಿ ಬರುತ್ತದೆ..

ಹೌದು.. ಒಪ್ಪಿಗೆಯಿದೆ... ಜೀವನದಲ್ಲಿ ಸಾಧನೆಗೋಸ್ಕರ ಅಥವಾ ಇನ್ಯಾವುದೋ ಸ್ವಾರ್ಥ ಉದ್ದೇಶಕ್ಕೋಸ್ಕರ ಸಮಯಕ್ಕೆ ತಕ್ಕಂತೆ ಬದಲಾಗುತ್ತಾ ಆದ್ಯತೆಯನ್ನು ಬದಲಾಯಿಸಿಕೊಳ್ಳಲೇ ಬೇಕೆನ್ನುವವರಿಗೆ ಹೀಗೂ ಉತ್ತರಿಸಬಹುದು... ನಿಮ್ಮ ಕಲ್ಪನೆಯ ಗುಡಿಯ ಬಾಗಿಲನ್ನು ಒಮ್ಮೆ ತೆರೆದು ನೋಡಿ.. 

ನಿಮ್ಮ ಆದ್ಯತೆಯು ನಿಮ್ಮ ಸಾಧನೆಯೆಡೆಗಿದ್ದು ಗುರಿಯೆಡೆಗೆ ನೀವು ನಡೆಯುತ್ತಿರುವಾಗ ನಿಮ್ಮ ಆತ್ಮೀಯರನ್ನೋ ಅಥವಾ ಪರಿವಾರದವರನ್ನೋ ಕಳೆದುಕೊಳ್ಳಬಹುದು. ಅವುಗಳ ಬಗ್ಗೆ ಒಮ್ಮೆ ಯೋಚಿಸಿ.. ಅದಕ್ಕೆ ನೀವು ಸಿದ್ಧರೆಂದರೆ ನನ್ನ ಆಕ್ಷೇಪಣೆಯೇನೂ ಇಲ್ಲ..
ಹೇಳುವುದಿಷ್ಟೇ... ಜೀವನ ಸಾಧನೆ ಅನ್ನುವ ಭರದಲ್ಲಿ ಆದ್ಯತೆ ಬದಲಾಗುತ್ತಾ ನೀವು ಬದಲಾಗುತ್ತಾ ಹೋದರೆ ನಿಮ್ಮ ಸಾಧನೆಗೆ ಅರ್ಥವಿರಲಾರದು. 

"ಸಾಧನೆ ಎಂಬುದು ಗಳಿಸಿಕೊಳ್ಳುವುದು ಕಳೆದುಕೊಳ್ಳುವುದಲ್ಲ".

ಪರ್ವತವನ್ನೇರಿದ ಮೇಲೆ ಪರ್ವತ ನಮ್ಮ ಕಾಲ್ಕೆಳಗೆ ಇರಬಹುದು ಆದರೆ ಹತ್ತಲು ಪ್ರತಿಯೊಂದು ಹೆಜ್ಜೆಗಳು ಮುಖ್ಯವಾಗಿರುತ್ತವೆ. ಅಂತೆಯೇ ಸಾಧನೆಯ ಹಾದಿಯಲ್ಲಿ ಸಹಕರಿಸಿದವರನ್ನು ಆದ್ಯತೆಯ ಅಹಂಕಾರದ ಅಮಲಿನಲ್ಲಿ ಬದಲಾದ ನೀವು ಮರೆಯಬಾರದಷ್ಟೇ...

ಸಾತ್ವಿಕವಾದ ಕೆಲವೊಂದು ಬದಲಾವಣೆಗಳು ಅತ್ಯಗತ್ಯ. ಏಕೆಂದರೆ "ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳಬೇಕು ಅಥವಾ ತ್ಯಾಗ ಮಾಡಬೇಕು" ಎಂಬುದು ನಿಯಮ. ಆದರೆ ಕಳೆದುಕೊಳ್ಳುವಂತದ್ದು ನಮ್ಮ ಮೂಲ ಅಸ್ತಿತ್ವ ಅಥವಾ ಶಕ್ತಿಯಾಗಿದ್ದಲ್ಲಿ ಆದ ಬದಲಾವಣೆಗೆ ಹಾಗೂ ಅದರ ಪರಿಣಾಮಕ್ಕೆ ಯಾವುದೇ ಅರ್ಥವೂ ಇರಲಾರದು...

Comments

Popular posts from this blog

ಅನಿಶ್ಚಿತ

ಸಮಯ ಸಮಸ್ಯೆ?

ನಗುವರಿಯದ ಮುಖ..

ಅಮ್ಮ

ಮರುಳು ಜೀವನ

ಕೆಂಪು ಮಣ್ಣಿನ ನೆಲ

ಮನು ಮತ್ತು ತಾತ

ಚಂಚಲ