ಮರುಳು ಜೀವನ

ಅದೊಂದು ಸಾಮಾನ್ಯವಾದ ಹಳ್ಳಿ. ಅದರ ಮಧ್ಯದಲ್ಲೊಂದು ಗುಡಿ. ನಗರದಿಂದ ಬಹು ದೂರದಲ್ಲಿದೆ. ಅಲ್ಲಿನ ಜನರು ಕೃಷಿಯನ್ನು ಅವಲಂಬಿಸಿ ಬದುಕು ಕಟ್ಟಿಕೊಂಡವರು. ಅವರಿಗೆ ವಿದ್ಯೆಯ ಪರಿಚಯವಿಲ್ಲ. ಬಹಳ ಮುಗ್ಧರು.
 
           ಹಳ್ಳಿಯ ಅಂಚಿನಲ್ಲೊಂದು ನದಿ ಹರಿಯುತ್ತದೆ. ಅದರ ತೀರದಲ್ಲಿಯೇ ಗುಡಿಸಲು ಎನ್ನಬಹುದಾದ ಒಂದು ಮನೆ ಇದೆ.  ಅದು ಬದ್ರಿ ಎನ್ನುವ ವಯಸ್ಕ ಸನ್ಯಾಸಿ ಮತ್ತು ಹೊನ್ನ ಎನ್ನುವ ಆತನ ಎಳೆಯ ಶಿಷ್ಯನ ಮನೆ. ಅಲ್ಲಿಗೆ ಬಹಳ ಜನರ ಓಡಾಟವಿರಲಾರದು. ಸ್ವಲ್ಪ ವರ್ಷಗಳಿಂದ ಈಚೆಗೆ ಅವರಿಗಿರುವುದು ಬರಿಯ ಸಣ್ಣ ಮಕ್ಕಳ ಒಡನಾಟ ಮಾತ್ರ.ಬಡವರಾದ ಹಳ್ಳಿಯ ಜನರು ಅಕ್ಷರಗಳ ಅಭ್ಯಾಸಕ್ಕೆಂದು ಮಕ್ಕಳನ್ನು ಆತನಲ್ಲಿಗೆ ಕಳುಹಿಸುತ್ತಿದ್ದರು. ಬರುವ ಐದಾರು ಮಕ್ಕಳಿಗೆ ಮನೆಯ ಮುಂದಿರುವ ಮಾವಿನ ಮರದ ಕೆಳಗೆ ಪಾಠ ಮಾಡುತ್ತಿದ್ದ. ಆತನ ಊಟ ಉಪಚಾರಕ್ಕೆಂದು ಹಳ್ಳಿಗರು ತಾವು ಬೆಳೆದ ಧಾನ್ಯಗಳನ್ನೋ ತರಕಾರಿಯನ್ನೋ ಗುರುಕಾಣಿಕೆಯ ರೂಪದಲ್ಲಿ ನೀಡುತ್ತಿದ್ದರು. ಆತ ಭಿಕ್ಷೆಯ ರೂಪದಲ್ಲಿ ಸ್ವೀಕರಿಸುತ್ತಿದ್ದ. ವಿಶೇಷ ಸಂದರ್ಭಗಳಲ್ಲಿ ಆತನಿಗೆ ಹಳ್ಳಿಯೊಳಗೆ ಆಹ್ವಾನ ದೊರೆಯುತ್ತಿತ್ತು.

ಹೀಗೊಮ್ಮೆ ಬದ್ರಿಗೆ ಊರಿನಿಂದ ನಾವಿಕನ ಮೂಲಕ ಜಾತ್ರೆಯ ಪೂಜೆಯನ್ನು ನೆರವೇರಿಸಲು ಕರೆ ಬಂತು. ನಾವಿಕನು ಆತನ ವೃತ್ತಿಯಲ್ಲಿ ಚತುರ. ಪ್ರತಿದಿನವೂ ಮಕ್ಕಳನ್ನು ನದಿ ದಾಟಿಸುತ್ತಿದ್ದವನು ಅವನೇ. ಗುರುಗಳು ಸಂತೋಷವಾಗಿ ಒಪ್ಪಿ ಶಿಷ್ಯನೋಡನೆ ಆತನ ದೋಣಿ ಹತ್ತಿದರು.

ಜಾತ್ರೆಯ ಬೀದಿಯನ್ನು ಪ್ರವೇಶಿಸಿದ ಕೂಡಲೇ ಗುರುಗಳಿಂದ ಶಿಷ್ಯ ಬೇರಾದ. ಗುರುಗಳು ನೇರವಾಗಿ ಗುಡಿಯ ಕಡೆ ನಡೆದರು. ಶಿಷ್ಯ ಅಂಗಡಿಗಳ ಕಡೆ ಹೊರಟ. ಅಲ್ಲೊಂದು ಘಟನೆಯನ್ನು ಗಮನಿಸಿದ. ಜಾತ್ರೆಯಾದ್ದರಿಂದ ದೂರದ ನಗರದಿಂದಲೂ ಕೆಲ ಗ್ರಾಹಕರು ಬಂದಿದ್ದರು. ಅವರಲ್ಲೊಬ್ಬ, ಮುಗ್ಧ ಹಳ್ಳಿಯ ಹೆಂಗಸಿನ ಬಳಿ ವ್ಯಾಪಾರವನ್ನು ಕುದುರಿಸುತ್ತಿದ್ದ. ಅವಳಿಗೆ ಅಕ್ಷರ ಜ್ಞಾನವಿಲ್ಲ,ಹಣದ ವಹಿವಾಟಿನ ಹೆಚ್ಚಿನ ಪರಿಚಯವಿರಲಿಲ್ಲ. ಆದರೂ ಬಗ್ಗಿದವನಿಗೆ ಮೇಲೊಂದು ಗುದ್ದು ಎಂಬಂತೆ ಅವಳನ್ನು  ಮೋಸಗೊಳಿಸುತ್ತಿದ್ದ. ಆತನ ಎದುರಿನಲ್ಲಿಯೇ ನೀವು ಆಕೆಯನ್ನು ಮೋಸದ ಜಾಲದಲ್ಲಿ ಸಿಲುಕಿಸುತ್ತಿದ್ದೀರಿ ಎಂದು ಹೇಳಲು ಹೊನ್ನನಿಗೆ ಧೈರ್ಯ ಸಾಲಲಿಲ್ಲ. ಆ  ಗ್ರಾಹಕ ಅಲ್ಲಿಂದ ಹೋದ ನಂತರ ಹೊನ್ನ ಆ ಹೆಂಗಸಿನ ಬಳಿ ಹೋಗಿ, "ಅಮ್ಮ ನಿಮ್ಮನ್ನು ಅವರು ಮೋಸಗೊಳಿಸಿದ್ದಾರೆ ನಿಮಗೆ ತಿಳಿಯಲಿಲ್ಲವೇ?" ಎಂದು ಕೇಳಿದ. ಮೋಸ ಹೋದ ವಿಷಯ ತಿಳಿದ ಮೇಲೂ ಆಕೆ ಆ ಗ್ರಾಹಕನ ಮೇಲೆ ಸಿಟ್ಟಾಗದೇ  ಹೀಗಂದಳು , "ಅವ್ನಿಗೆ ಗೊತ್ತಿಲ್ದೇ ತಪ್ಪಾಗಿದ್ದ್ರೆ  ನಾನು ಕ್ಷಮಿಸ್ತೀನಿ. ಬೇಕಂತ್ಲೇ ಅಂವ ಮೋಸಮಾಡಿದ್ರೆ ಆ ದೇವರು ಅವ್ನನ್ನು ಶಿಕ್ಷಿಸ್ತಾನೆ" ಎಂದು ಗುಡಿಯ ಕಡೆಗೆ ಕೈ ಮುಗಿಯುತ್ತಾ ಹೇಳಿದಳು. ಅವಳ ಮಾತಿನಿಂದ ಆಶ್ಚರ್ಯಗೊಂಡ ಹೊನ್ನ ಆಕೆಯ ನಂಬಿಕೆಗೆ ನಮಸ್ಕರಿಸಿ ಗುಡಿಯಲ್ಲಿದ್ದ ಗುರುಗಳ ಬಳಿ ಬಂದ. ಪೂಜೆಯಲ್ಲಿ ಪಾಲ್ಗೊಂಡ. ಎಲ್ಲ ಮುಗಿದು ಅಲ್ಲಿಂದ ಹೊರಡುವ ವೇಳೆಯಲ್ಲಿ ಗುರುಗಳನ್ನು ಪ್ರಶ್ನಿಸಿದ.ಗುರುದೇವಾ ಇಲ್ಲಿ ದೇವರು ಸುಮ್ಮನೆ ಕುಳಿತಿದ್ದಾನೆ. ಅಲ್ಲಿ ನೋಡಿದರೆ ಆ ಹೆಂಗಸು ತನಗೆ ಮೋಸ ಮಾಡಿದವರನ್ನು ದೇವರು ಶಿಕ್ಷಿಸುತ್ತಾನೆ ಎಂದು ಹೇಳುತ್ತಿದ್ದಾಳೆ ನಿಜವಾಗಲೂ ಇದು ಸಾಧ್ಯವೇ?. ಗುರುಗಳು ಆ ಕ್ಷಣ ಏನು ಉತ್ತರಿಸಲಿಲ್ಲ ನದಿಯ ಬಳಿ ಬಂದು ದೋಣಿಯ ಮೇಲೆ ಕೂತಾಗ ಉತ್ತರಿಸಿದರು. ಮಗೂ ನಮಗೆ ಈ ನಾವಿಕ ಆ ದಡವನ್ನು ತೋರಿಸುತ್ತಾನೆ ಎಂದು ಹೇಗೆ ನಂಬಿಕೆ ಇದೆಯೋ ಅಂತೆಯೇ ಆಕೆಗೆ ಪರಮಾತ್ಮನ ಮೇಲೆ ದೃಢವಾದ ನಂಬಿಕೆ ಇರಬಹುದು. ನಂಬಿಕೆಯ ಫಲವು ದೊರೆಯದೆ ಹೋಗದು. "ಸತ್ಯಮೇವ ಜಯತೇ ನಾನೃತಮ್"(ಸತ್ಯವೇ ಜಯಿಸುತ್ತದೆ, ಅಸತ್ಯವಲ್ಲ) ಎಂಬ ಪಾಠವನ್ನು ನೆನಪು ಮಾಡಿಕೊ. ನಮ್ಮ ನಡೆ ನುಡಿ ಯಾವಾಗಲೂ ಸತ್ಯದಂತೆ ಶುದ್ಧವಾಗಿರಬೇಕು . ಆಕೆ ಅದನ್ನೇ ಮಾಡಿದ್ದಾಳೆ. ಅವರು ಮೋಸದಿಂದ ಅಸತ್ಯದ ಮೂಲಕ ಈ ಕ್ಷಣದಲ್ಲಿ ಮಾತ್ರ ಜಯಶಾಲಿಗಳಾಗಿದ್ದಾರೆ."ಕರ್ಮಣ್ಯೇವಾಧಿಕಾರಸ್ತೇ" ಎಂದು ಶ್ರೀ ಕೃಷ್ಣ ಹೇಳಲಿಲ್ಲವೇ.... ಅವರ ಶಿಕ್ಷೆ ಆತನಿಗೆ ಬಿಡಲ್ಪಟ್ಟದ್ದು ಎನ್ನುವಷ್ಟರಲ್ಲಿ ನದಿ ದಾಟಿಯಾಗಿತ್ತು. ಇಬ್ಬರೂ ಇಳಿದುಕೊಂಡರು. 

ಗುರು ಶಿಷ್ಯರನ್ನು ಕ್ಷೇಮವಾಗಿ ದಡ ತಲುಪಿಸಿದ ನಾವಿಕ ತಿರುಗಿ ಹಳ್ಳಿಗೆ ಬರುವಷ್ಟರಲ್ಲಿ ಸೂರ್ಯ ಕಂದುತ್ತಿದ್ದ.  ಹಳ್ಳಿಯ ಪಂಚಾಯಿತಿ ಕಟ್ಟೆಯಲ್ಲಿ ಘೋಷಣೆಯೊಂದು ನಡೆಯುತ್ತಿತ್ತು. ಗುರು ಶಿಷ್ಯರ ಸಂಭಾಷಣೆಯನ್ನು ಆಲಿಸಿದ್ದ ನಾವಿಕನಿಗೆ ಅದನ್ನು ಕೇಳಿ ಒಂದು ಕ್ಷಣ ಅವಾಕ್ಕಾಯಿತು. ಜಾತ್ರೆಯಲ್ಲಿ ಹಳ್ಳಿಯ ಹಲವು ವ್ಯಾಪಾರಿಗಳಿಗೆ ವಂಚನೆ ಮಾಡಿರುವವರನ್ನು ಬಂಧಿಸಿರುವುದಾಗಿಯೂ ಇನ್ನು ಮುಂದೆ ಯಾರಾದರೂ ಇಂತಹ ವರ್ತನೆ ತೋರಿದಲ್ಲಿ ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸುವುದಾಗಿಯೂ ಅಧ್ಯಕ್ಷ ಪಂಚಾಯ್ತಿಯ ನಿರ್ಧಾರವನ್ನು ಓದುತ್ತಿದ್ದ. ಇದನ್ನು ಕೇಳಿ ನಾವಿಕ "ಪರಮಾತ್ಮ ಏನಪ್ಪ ನಿನ್ನ ಲೀಲೆ!!" ಎಂದು ಮನಸ್ಸಿನಲ್ಲಿಯೇ ಅಂದುಕೊಂಡು ಮನೆ ಸೇರಿದ..

ಕೆಲವು ತಿಂಗಳುಗಳುರುಳಿದವು....

ಒಂದು ನಸುಕಿನಲ್ಲಿ ನಾವಿಕ ತನ್ನ ದೋಣಿಯನ್ನು ದಿನದ ಕೆಲಸಕ್ಕೆ ಸಿದ್ಧಪಡಿಸುತ್ತಿದ್ದ. ಆಗಲೇ ದೂರದಲ್ಲಿ ಒಂದು ಮನುಷ್ಯಾಕೃತಿ ತನ್ನಡೆಗೆ ಬರುತ್ತಿರುವುದು ಕಾಣಿಸಿತು. ಆಕೃತಿಯು ಹತ್ತಿರವಾದಂತೆ ಬರುತ್ತಿರುವವನು ಒಂದು ತಿಂಗಳಿನಿಂದ ಕಾಣೆಯಾದ ಊರ ಅಧ್ಯಕ್ಷರ ಮಗನೆಂದು ತಿಳಿಯಿತು. ವಯಸ್ಸಿನಲ್ಲಿ ಆತ ತನಗಿಂತ ಬಹಳ ಚಿಕ್ಕವನಾಗಿದ್ದರೂ ಊರ ಮುಖಂಡನ ಮಗನಾದ್ದರಿಂದ ಅವನು ಸಮೀಪಿಸಿದಾಗ ಗೌರವ ಸೂಚಕವಾಗಿ ತಲೆಗೆ ಕಟ್ಟಿದ್ದ ರುಮಾಲನ್ನು ಬಿಚ್ಚಿ ಕೈಯಲ್ಲಿ ಹಿಡಿದು ಸ್ವಲ್ಪ ಬೆನ್ನು ಬಾಗಿ ನಿಂತ. ಬಂದಾತ ನೇರವಾಗಿ ಮಾತನ್ನಾರಂಭಿಸಿದ.. "ನಿನ್ನಿಂದ ನನಗೊಂದು ಸಹಾಯವಾಗಬೇಕಾಗಿದೆ. ನಾನು ಹೇಳುವುದೆಲ್ಲವನ್ನೂ ಯಥಾವತ್ತಾಗಿ ನನ್ನ ಮನೆಯವರ ಬಳಿ ಹೋಗಿ ಹೇಳು ಎಂದ.

ತಾನು ತಿಂಗಳ ಹಿಂದೆ ನಗರಕ್ಕೆ ಹೋದಾಗ ಅಲ್ಲಿ ಒಬ್ಬ ಸುಂದರ ತರುಣಿಯ ಮೋಹಕ್ಕೊಳಗಾದೆ. ಅದು ದಿನವೊಂದರಲ್ಲೇ ಪ್ರೀತಿಗೆ ತಿರುಗಿತು. ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟು ಬದುಕಲು ಸಾಧ್ಯವಿಲ್ಲವೆಂದೆನಿಸುವಷ್ಟಾಯಿತು. ಆಕೆಯ ಜೊತೆ ಮನೆಗೆ ಬರಬೇಕೆಂದುಕೊಂಡೆ. ಆದರೆ ಆಕೆ ವಿವಾಹವಾಗಲು ಕೆಲವು ನಿಬಂಧನೆಗಳನ್ನು ಒಡ್ಡಿದಳು. ಅವಳಿಗೆ ಈ ಹಳ್ಳಿಯಲ್ಲಿ ಬದುಕಲು ಸಾಧ್ಯವಿಲ್ಲವಂತೆ. ಅತ್ತೆ ಮಾವಂದಿರು ಪೀಡೆಯಾಗುತ್ತಾರಂತೆ. ಮೂರ್ಖರಾದ ಇಲ್ಲಿನ ಜನರೊಂದಿಗೆ ನಾನು ಯಾವುದೇ ಸಂಬಂಧವನ್ನು ಇರಿಸಿಕೊಳ್ಳಬಾರದಂತೆ. ಇದರಿಂದಾಗಿ ನಾನು ತಂದೆ ತಾಯಿಯಿಂದ ದೂರವಾಗಿ ಆಕೆಯನ್ನು ವಿವಾಹ ಮಾಡಿಕೊಂಡು ನಗರದಲ್ಲಿಯೇ ವಾಸಿಸಲು ನಿರ್ಧರಿಸಿದ್ದೇನೆ. ನನ್ನನ್ನು ಹುಡುಕುವ ಪ್ರಯತ್ನವನ್ನು ನಿಲ್ಲಿಸಬೇಕೆಂದು, ನಿಲ್ಲಿಸದಿದ್ದಲ್ಲಿ ಸಂತೋಷದಿಂದಿರುವ ಮಗನನ್ನು ಕಳೆದುಕೊಳ್ಳುತ್ತೀರೆಂದು ಹೇಳಿ. ತಂದೆ ತಾಯಿಗೆ ನನ್ನ ಕೊನೆಯ ಪ್ರಣಾಮಗಳನ್ನು ತಿಳಿಸಿ ಎಂದು ಹೇಳುತ್ತಾ ಪ್ರತ್ಯುತ್ತರಕ್ಕಾಗಿ ಕಾಯುದೇ ಬಂದ ದಾರಿಯಲ್ಲಿ ಹೊರಟೇ ಹೋದ. ಇದಾದ ಸ್ವಲ್ಪ ಹೊತ್ತಿನ ಬಳಿಕ ಅಧ್ಯಕ್ಷರ ಮನೆಯಲ್ಲಿನ ಗಲಾಟೆ, ಆತನ ತಾಯಿಯ ಕೂಗು ದಡದಾಚೆಗಿನ ಗುರು ಶಿಷ್ಯರಿಗೂ ಚಿಕ್ಕದಾಗಿ ಕೇಳಿಸಿತು.

ಸ್ವಲ್ಪ ಸಮಯದ ಬಳಿಕ ಎಂದಿನಂತೆ ನಾವಿಕ ಮಕ್ಕಳ ಜೊತೆ ಆಚೆಗಿನ ದಡವನ್ನು ತಲುಪಿದ. ಗುರುಗಳಿಗೆ ಊರಲ್ಲಿ ನಡೆದ ವಾರ್ತೆಯನ್ನು ಹೇಳಿ, ತಾಯಿಯ ದುಃಖವನ್ನು ವಿಸ್ತೃತವಾಗಿ ವಿವರಿಸಿದ . ಇದನ್ನು ಕೇಳಿದರೂ ಗುರುಗಳು ಎಂದಿನಂತೆ ಭಾವಹೀನರಾಗಿ ಮೌನಿಯಾಗಿದ್ದರು. ಆದರೆ ತಾಯಿಯ ಪ್ರೀತಿಯನ್ನೇ ನೋಡದಿರುವ ಹೊನ್ನನಿಗೆ ಕಣ್ಣೀರು ತುಂಬಿ ಬಂತು.  ದುಃಖದಿಂದ ಗುರುಗಳ ಬಳಿ ಹೀಗೆ ಕೇಳಿದ. ಯಾಕೆ  ಆ ತಾಯಿಗೆ ಇಷ್ಟು ದುಃಖ? 25 ವರ್ಷಗಳಿಂದ ಆ ಯುವಕನಿಗೆ ಅವಿರತ ಪ್ರೀತಿಯನ್ನು ಧಾರೆಯರದದ್ದು ಅವಳ ತಪ್ಪೇ ?.. ಅಷ್ಟಾದರೂ ಆ ಯುವಕ ಮಾಡಿದ್ದು ಸರಿಯೇ? 25 ವರ್ಷಗಳ ವಾತ್ಸಲ್ಯದ ಪ್ರೀತಿ, ಒಂದು ದಿನದ ಸೌಂದರ್ಯದ ಮೋಹದ ಮೋಡಿಗೆ ಸಮನಾದುದೇ?

ಶಿಷ್ಯನನ್ನು ಹತ್ತಿರ ಕರೆದು ಗುರುಗಳು ಸರಿ ತಪ್ಪುಗಳೆಂಬ ತೀರ್ಮಾನದ ಅವಶ್ಯಕತೆ ಇಲ್ಲಿ ನನಗೆ ಕಾಣುತ್ತಿಲ್ಲ ಆದರೆ ಸಮ ಚಿತ್ತತ್ವದ ಅವಶ್ಯಕತೆ ಎದ್ದು ಕಾಣುತ್ತಿದೆ ಎಂದರು. ಶತ್ರುವಿನಲ್ಲಿಯೂ ಹಾಗೆಯೇ ಮಿತ್ರ, ಪುತ್ರ, ಬಂಧುಗಳ ಜೊತೆಗೂ ಹೀಗೆ ಪ್ರತಿ ಸಂಬಂಧದಲ್ಲಿಯೂ ಒಂದೇ ರೀತಿಯ ಭಾವನೆಯಿರಬೇಕು. ಶರೀರವೇ ನಷ್ಟವಾಗುವ ವಸ್ತು ಇನ್ನು ಮನುಷ್ಯ ನಿರ್ಮಿಸಿಕೊಂಡ ಈ ಪ್ರಾಪಂಚಿಕ ಸಂಬಂಧಗಳು ನಾಶವಾಗದಿರುತ್ತವೆಯೇ? ಇವೆಲ್ಲ ಕೆಲಕಾಲದ ಭ್ರಮೆ ಅಷ್ಟೇ ಎಂದು ಹೇಳಿ ಸುರಿಯುತ್ತಿರುವ ಶಿಷ್ಯನ ಕಣ್ಣೀರನ್ನು ನಿಲ್ಲಿಸಿದರು... ಇನ್ನು ಆ ಯುವಕನ ವಿಚಾರದಿಂದ 

    ನಾರೀಸ್ತನಭರನಾಭೀದೇಶಂ
                     ದೃಷ್ಟ್ವಾ ಮಾ ಗಾ ಮೋಹಾವೇಶಮ್ |
    ಏತನ್ಮಾಂಸವಸಾದಿವಿಕಾರಂ
                     ಮನಸಿ ವಿಚಿಂತಯ ವಾರಂವಾರಮ್ || 
     
ಹೆಣ್ಣಿನ ದೇಹದ ಅಂಗಾಂಗ ಸೌಂದರ್ಯವನ್ನು ನೋಡಿ ಮೋಹಕ್ಕೂ, ಆವೇಶಕ್ಕೂ ಒಳಗಾಗಬಾರದು. ದೇಹವು ಒಂದು ಮಾಂಸದ ರಚನೆ. ಅಸ್ತಿ, ಮಜ್ಜೆಗಳ ವಿಕಾರ. ಅಶಾಶ್ವತವಾದ ವಸ್ತುವಿನ ಮೇಲೆ ಮೋಹಗೊಳ್ಳುವ ಮೊದಲು ಮತ್ತೆ ಮತ್ತೆ ಮನಸ್ಸಿನಲ್ಲಿ  ಚಿಂತಿಸು ಎಂಬ ಪಾಠವನ್ನು ನಾವು ಅರಿಯಬಹುದು ಎಂದು ಶಿಷ್ಯನಿಗೆ ಹೇಳಿದರು. ಹೊಸ ಪಾಠವನ್ನು ಕೇಳಿದ ಶಿಷ್ಯ ಸಮಾಧಾನಗೊಂಡ. ಅಲ್ಲೇ ಇದ್ದು ಇದೆಲ್ಲ ಕೇಳಿದ ನಾವಿಕನಿಗೆ ವಿಷಯವೇನೂ ಬಗೆಹರಿಯಲಿಲ್ಲ ಆತ ಸುಮ್ಮನೆ ಹಿಂದಿರುಗಿದ.

ಇದಾದ ಸ್ವಲ್ಪ ದಿನಗಳ ನಂತರ ಮಳೆಗಾಲ ಆರಂಭವಾಯಿತು. ಮಧ್ಯ ಒಂದು ದಿನ ವಿದ್ಯಾರ್ಥಿಗಳು ಪಾಠಕ್ಕೆ ಬರಲಿಲ್ಲ. ಏನೋ ತೊಂದರೆಯಾಗಿರಬೇಕು ಎಂದು ಗುರುಗಳು ಎಣಿಸಿದರು. ಮರುದಿನ ಬೇರೊಬ್ಬ ನಾವಿಕ ಮಕ್ಕಳೊಡನೆ ಬಂದ. ಮೊದಲು ಬರುತ್ತಿದ್ದವನು ನಿನ್ನೆ ನೀರಿನಲ್ಲಿ ಕೊಚ್ಚಿ ಹೋದ ಎನ್ನುವ ವಿಷಯವನ್ನು ತಿಳಿಸಿದ. ಮೊದಲು ಶಿಷ್ಯನಿಗೆ ಅವಾಕ್ಕಾಯಿತಾದರೂ  ಮೋಹ ಮುದ್ಗರ ಸ್ತೋತ್ರದ "ಹೇ! ಮೂಢನೆ ಸಾವಿನ ಸಮಯ ಬಂದಾಗ ಯಾವ ವಿದ್ಯೆಯೂ ,ಶಾಸ್ತ್ರ ಪಾಂಡಿತ್ಯವೂ ಸಹಾಯವಾಗಲಾರದು ಅದಕ್ಕಾಗಿ ದೇವರನ್ನು ನೆನೆ" ಎಂಬ ಸಾಲುಗಳು ನೆನಪಾದವು. ಅವನ ಬಗೆಗೆ ಹೆಚ್ಚು ಯೋಚಿಸದೆ ಬಂದ ಮಕ್ಕಳೊಡನೆ ತಾನೂ ಗುರುಗಳ ಪಾಠಕ್ಕೆ ಹೋಗಿ ಕುಳಿತ.

ಗುರುಗಳು ವಿದ್ಯಾರ್ಥಿಗಳಿಗೆ, ಜೀವನದ ಪ್ರತಿಯೊಂದು ಘಟನೆಯನ್ನು ಎದುರಿಸಿ ನಡೆಯಲು ನಮ್ಮ ಬಳಿಯೇ ಉತ್ತರಗಳಿರುತ್ತವೆ. ನಮ್ಮ ಕಷ್ಟಕ್ಕಾಗಿ ಬೇರೆಯವರನ್ನು ದೂಷಿಸುವ ಬದಲು ಪರಿಸ್ಥಿತಿಯ ಸತ್ಯತೆಯನ್ನು ಅರ್ಥೈಸಿಕೊಳ್ಳುವ ಅವಶ್ಯಕತೆ ಇದೆ. ಮನುಷ್ಯನಿಗೆ ಜೀವನದಲ್ಲಿ ಸತ್ಯವನ್ನು ಅಪ್ಪಿಕೊಳ್ಳುವ ಧೈರ್ಯವಿರಬೇಕು. ಸಂಸಾರವೆಂಬುದು ಕತ್ತಲೆಯ ರಾತ್ರಿ ಅಲ್ಲಿ ನಮಗೆ ಆತ್ಮಜ್ಞಾನವೆಂಬುದು ದಾರಿದೀಪ. ನಮ್ಮ ದೇಹ ನೀರ ಮೇಲಿನ ದೋಣಿಯಂತೆ, ಆತ್ಮವಿರುವಷ್ಟು ಹೊತ್ತು ಮಾತ್ರ ನಾವು ಜೀವಂತ. ದೋಣಿ ಮಗುಚಿ ಬಿದ್ದಂತೆ ಅಚಾನಕ್ಕಾಗಿ, ಆತ್ಮ ದೇಹದಿಂದ ಬೇರ್ಪಟ್ಟರೆ ಇದೊಂದು ಕ್ಷಣಮಾತ್ರದಲ್ಲಿ ಹುಳಹಪ್ಪಟೆಗಳಿಗೆ ಮನೆಯಾಗುವ ಹೇಸಿಗೆಯ ವಸ್ತುವಾಗುತ್ತದೆ ಎಂದು ಹೇಳುತ್ತಿರುವಾಗ ಮೇಲಿರುವ ಮಾವಿನ ಮರದ ಎಲೆಗಳಿಂದ ಮಳೆನೀರು ಹನಿಯುತ್ತಿತ್ತು.



Comments

Popular posts from this blog

ಅನಿಶ್ಚಿತ

ಸಮಯ ಸಮಸ್ಯೆ?

ನಗುವರಿಯದ ಮುಖ..

ಆದ್ಯತೆ ( priority )

ಅಮ್ಮ

ಕೆಂಪು ಮಣ್ಣಿನ ನೆಲ

ಮನು ಮತ್ತು ತಾತ

ಚಂಚಲ