ಮನು ಮತ್ತು ತಾತ

                ದೂರದಲ್ಲಿ ಕಾಣುತ್ತಿರುವ ಮರ ರಸ್ತೆಯ ಹಿಂದಿನ ಯಾವುದೋ ತಿರುವಿನಲ್ಲಿ ಮಾಯವಾಯಿತು. ಪ್ರಯಾಣಕ್ಕೆ ಹೊರಟಿದ್ದ ಮನು ಕಿಟಕಿಯಿಂದ ತಲೆ ಹೊರಹಾಕಿ ಬೀಸುತ್ತಿದ್ದ ಗಾಳಿಯನ್ನು ಅನುಭವಿಸುತ್ತಿದ್ದ. ಮನಸ್ಸಿನೊಳಗಿರುವ ಬಹಳಷ್ಟು ಪ್ರಶ್ನೆಗಳು ಆ ಕ್ಷಣ ಅವನಿಗೆ ಜಗತ್ತನ್ನೇ ಮರೆಸಿದ್ದವು. ವಾಸ್ತವಕ್ಕೆ ಬರಲು ಬಸ್ ಕಂಡಕ್ಟರ್ ಜೋರಾಗಿ ಕೂಗಬೇಕಾಯಿತು.

               ಮನುವಿಗೆ ಪರೀಕ್ಷೆಗಳು ಮುಗಿದು ಈಗ ರಜೆಯ ಕಾಲ. ಬುದ್ಧಿವಂತನಲ್ಲದ ಅವನ ಓದೇ ಒಂದು ಸಾಹಸ ಕಥೆ. ಮನುಷ್ಯನಲ್ಲಿ ಒಂದು ಅಂಶದ ಕೊರತೆಯಿದ್ದರೆ ಇನ್ನೊಂದರ ಆಧಿಕ್ಯವಿರುತ್ತದೆ. ಆತ ಜೀವನದ ಪ್ರತಿ ಕ್ಷಣವನ್ನು ಅದ್ಭುತವನ್ನಾಗಿ ಅನುಭವಿಸಲು ಬಯಸಿದವ. ಹಾಗಾಗಿ ಫಲಿತಾಂಶದ ಭಯವಾಗಿ ಅದು ಪ್ರಕಟವಾಗುವ ಹೊತ್ತಿಗೆ ಒಂದು ದಿನ ಬೆಳಿಗ್ಗೆ ಆತ ಮನೆಯಿಂದ ಹೊರಟ. ಮಧ್ಯಾಹ್ನದ ವೇಳೆಗೆ ಬಸ್ಸಿನಿಂದ ಇಳಿದು ಎರಡು ಮೈಲಿ ದೂರದಲ್ಲಿರುವ ತಾತನ ಮನೆಗೆ ಕಾಲ್ನಡಿಗೆಯಲ್ಲಿ ಹೊರಡಲು ನಿಶ್ಚಯಿಸಿದ. ನಡೆಯತೊಡಗಿದಾಗ ಅಲ್ಲಲ್ಲಿ ದಾರಿಯ ಪಕ್ಕ ಗುಡಿಸಲುಗಳು ಮುರಿದುಬೀಳಲು ತಯಾರಾಗಿರುವ ಜೋಪಡಿಗಳು ಕಾಣಿಸಿದವು. ಮುನ್ನಡೆದ. ಎರಡಂತಸ್ತಿನ ಭರ್ಜರಿ ಮನೆಗಳೂ ಕಾಣಿಸಿದವು. ಅವುಗಳನ್ನೆಲ್ಲ ನೋಡುತ್ತಾ ಅಂತೂ ತಾತನ ಮನೆಯ ಬಾಗಿಲು ಬಡಿಯುವ ಹೊತ್ತಿಗೆ ಸರಿಯಾದ ಊಟದ ಸಮಯ. ದಣಿವಾದ್ದರಿಂದ ಸೋಪಸ್ಕಾರದ ಊಟವಾದ ಮೇಲೆ ಸುಖ ನಿದ್ರೆಗೆ ಜಾರಿದ.

          ಎದ್ದಾಗ ಸಂಜೆ ಸುಮಾರು 5 ಗಂಟೆ. ಮೊಬೈಲ್ ತೆಗೆಯಲು ಭಯ. ಆಗಲೇ ಗೆಳೆಯರ 3-4 ಸ್ವೀಕರಿಸಿದ ಕರೆಗಳಿದ್ದವು.ಫಲಿತಾಂಶ ನೋಡಿದಾಗ ಊಹೆ ಸರಿಯಾಗಿತ್ತು. ಕೆಲವು ವಿಷಯಗಳಲ್ಲಿ ಕಡಿಮೆ ಅಂಕ ಬಂದಿತ್ತು. ಇದನ್ನು ನೋಡಿ ದುಃಖಿಸುತ್ತಾ ಮನೆಯ ಅಂಗಳದ ಉದ್ಯಾನವನ್ನು ದಾಟಿ ಮುಂದಿರುವ ತೆಂಗಿನತೋಟದ ಮರದ ಬುಡದಲ್ಲಿ ಹೋಗಿ ಕುಳಿತ.

                    ಹಿರಿಯ ವಯಸ್ಸಿನ ತಾತ ಅದಾಗಲೇ ತೋಟಕ್ಕೆ ಬಂದು ಸುಮಾರು ಕೆಲಸ ಮುಗಿಸಿದ್ದರು. ತುಂಬು ಚೈತನ್ಯದ ಅವರು ಮನುವನ್ನು ನೋಡಿ, ಏನಾಯಿತು ಪ್ರಯಾಣ ಸುಖವಾಗಿರಲಿಲ್ಲವಾ? ಮಧ್ಯಾಹ್ನದ ಊಟ ಸರಿಯಾಗಲಿಲ್ಲವಾ? ಎಂದೆಲ್ಲಾ ಕಾಳಜಿ ತೋರಿಸಿದರು. ಮನು ತನ್ನ ಅವಸ್ಥೆಯನ್ನು ಹೇಳಿದ; ಅಂತ್ಯದಲ್ಲಿ ಈ ಜೀವನ ಸಂಭ್ರಮವೋ, ಹೋರಾಟವೋ ಒಂದೂ ಗೊತ್ತಿಲ್ಲ.ಆದರೆ ನನ್ನ ಜೀವನವಂತೂ ಇಲ್ಲಿಗೆ ಮುಗಿಯಿತು ಎಂದ. ತಾತ ಮುಗುಳ್ನಕ್ಕರು. ಅದಾಗಲೇ ಸಂಜೆಯಾದ್ದರಿಂದ ಮನೆಗೆ ಬಂದರು. ರಾತ್ರಿಯಾದರೂ ಮನು ಒಳಗೆ ಬಾರದೇ ಹೊರಗಿನ ಕಟ್ಟೆ ಮೇಲೆಯೇ ಕುಳಿತಿದ್ದ. ನಾಳೆ ಬೆಳಿಗ್ಗೆ ಬೇಗ ಏಳಬೇಕು; ಊರನ್ನು ಸುತ್ತಾಡಿ ಬರೋಣ ಎಂದು ಹೇಳಿ ತಾತ ಮಲಗಲು ಹೋದರು.

               ಮನು ಏಳುವಷ್ಟೊತ್ತಿಗೆ ಹೊರಡಲು ತಯಾರಾಗಿದ್ದ ತಾತ ಬೇಗ ಸಿದ್ಧವಾಗುವಂತೆ ಹೇಳಿದರು. ತಾತನನ್ನು ಅನುಸರಿಸುತ್ತಾ ಹಿಂದಿನ ದಿನ ಮನು ನೋಡಿದ ಜೋಪಡಿಯೊಂದಕ್ಕೆ ಹೋದರು. ಅಲ್ಲೊಬ್ಬಳು ಮಹಾತಾಯಿ ಕೆಲಸಕ್ಕೆ ಹೊರಡುವ ಗಡಿಬಿಡಿಯಲ್ಲಿದ್ದಳು. ಅವಳ ಮೂರ್ನಾಲ್ಕು ವರ್ಷದ ಮಗುವೊಂದು ತಿಂಡಿಯ ಚೂರನ್ನು ಹಿಡಿದು ತಿನ್ನುತ್ತಿತ್ತು. ಅದಕ್ಕೆ ಸರಿಯಾಗಿ ಬಟ್ಟೆಯಿರಲಿಲ್ಲ. ಮನು ಅಲ್ಲಿಯ ಆವಾರ ಗಮನಿಸಿದ. ಹರಕು ಮೂಲೆಯಲ್ಲೊಂದು ಪುರುಷನ ಮುರುಕು ಫೋಟೋ ಬಿದ್ದಿತ್ತು. ಅದು ಅಲ್ಲಿದ್ದ ಮಗುವಿನ ತಂದೆಯದ್ದು. ಅವನು ಸತ್ತು ವರ್ಷಗಳಾಗಿದ್ದವಷ್ಟೇ.

                         ಇವರು ಬಂದಿರುವುದನ್ನು ನೋಡಿದ ಆ ಮಹಾತಾಯಿ ಸ್ವಲ್ಪ ಸುಧಾರಿಸಿಕೊಂಡು "ಅಯ್ಯಾ ಎನಿತ್ತ" ಎನ್ನಲು ತಾತ ಕೈಯಲ್ಲಿದ್ದ ಅಕ್ಕಿಯ ಚೀಲವನ್ನು ಅವಳ ಕೈಗಿತ್ತ. ಅವಳಿಗೆ ತನ್ನ ಮೊಮ್ಮಗನ ಪರಿಚಯ ಮಾಡಿಸಿದರು. ಶಾಲಾ ಪರೀಕ್ಷೆಯ ಫಲಿತಾಂಶದಿಂದ ತನ್ನ ಜೀವನವೇ ಮುಗಿಯಿತೆಂದು ಕೂತಿದ್ದ. ಅದಕ್ಕೆ ನಿನ್ನ ಬಳಿ ಬಂದಿರುವೆನಮ್ಮ ಎಂದರು. ಇವಳೂ ಅಕ್ಷರಸ್ಥಳೇ... ಗಂಡನ ಸಾವಿನ ನಂತರ ಮನೆಯಿಂದ ಹೊರದಬ್ಬಿದರು. ಇಲ್ಲಿ‌ ಬಂದು ಸ್ವಾಭಿಮಾನಿಯಾಗಿ ಮಗುವಿನೊಂದಿಗೆ ಜೀವನದ ಹೋರಾಟ ನಡೆಸುತ್ತಿದ್ದಾಳೆ ಎಂದು ಮನುವಿಗೂ ಅವಳ ಕಿರು ಪರಿಚಯ ಹೇಳಿದರು.

               ತಾಯಿ ಸಹಜ ಮಮತೆಯಿಂದ ಮನುವಿನ ತಲೆಯಮೇಲೆ ಕೈಯಾಡಿಸಿದ ಅವಳು; ಹುಡುಗ ನನ್ನ ಜೀವನದ ಕಥೆಯೊಂದನ್ನು ಬಿಟ್ಟರೆ ನಿನಗೆ ಸ್ಫೂರ್ತಿ ತುಂಬಲು ಏನೂ ನನ್ನ ಬಳಿ ಇಲ್ಲ. ಮಧ್ಯೆ ಏನೋ ಹೊಳೆದಂತಾಗಿ ನಾನೆಷ್ಟು ಮೂರ್ಖಳು ನೋಡು ಕುಳಿತುಕೊಳ್ಳಲೂ ಹೇಳಿಲ್ಲ ಎಂದಳು. ವಾಸ್ತವವಾಗಿ ಅಲ್ಲಿ ನೆಲ ಬಿಟ್ಟರೆ ಬೇರೇನೂ ಇರಲಿಲ್ಲ ಅಲ್ಲಿಯೇ ಕುಳಿತರು.

               ನಿನ್ನ ವಯಸ್ಸಲ್ಲಿ ನನಗೂ ಓದುವ ಹಂಬಲವಿತ್ತು. ಆದರೇನು, ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ. ತಂದೆ ಲಕ್ಷಾನುಗಟ್ಟಲೆ ಹಣ ತೆಗೆದುಕೊಂಡು ನನ್ನ ಮದುವೆ ಮಾಡಿಸಿ ದೇಶಾಂತರ ಹೋದ. ತಾಯಿ ಕೊರಗುತ್ತಾ ಎರಡು ವರ್ಷದಲ್ಲಿ ಸತ್ತಳು. ಅದಾದ ಕೆಲವು ವರ್ಷಗಳಲ್ಲಿ ಈ ಕಂದ ಹುಟ್ಟಿತೆಂದು ತನ್ನ ಮಗುವನ್ನು ತೋರಿಸುತ್ತಿರಲು ಕಣ್ಣಲ್ಲಿ ನೀರು ತುಂಬಿತು. ಯಾರ ದುರಾದೃಷ್ಟವೋ!!.... ಹುಟ್ಟಲಿರುವ ಮಗುವ ಮುಖವನ್ನೂ ನೋಡದೆ ಅಪ್ಪ ಅನಿಸಿಕೂಳ್ಳಬೇಕಾದವ ಜಗವ ಬಿಟ್ಟು ಹೊರಟ. ಪ್ರಸವವಾದ ದಿನ ಮಾವನವರಿಗೆ ಅಪಘಾತವಾಯಿತು. ನನ್ನ ಪ್ರವೇಶ ಮನೆಗೆ ದುರ್ಭಾಗ್ಯವೆಂದು ಶಪಿಸಿ ಅಲ್ಲಿಂದ ಹೊರದಬ್ಬಿದರು. ಈಗ ಇಲ್ಲಿ ಬಂದು ಕೆಲವು ವರ್ಷಗಳಾದವು ಎಂದಳು.

            ಅಬ್ಬಾ!.. ಎಂಥ ನೀಚತನ. ಮಗುವಿನ ಕೂಗಿಗೂ ಅವರ ಹೃದಯ ಕಲ್ಲಾಗೇ ಉಳಿಯಿತಲ್ಲ. ಇನ್ನೆಲ್ಲಿಂದ ಮಾನವೀಯತೆಗೆ ಸಹಕಾರ. ಆ ದಿನದಿಂದ ಇಂದಿನವರೆಗೂ ಬದುಕಿನ ಹೋರಾಟ ಹೇಗೆ ಸಾಧ್ಯವಾಯಿತಮ್ಮಾ ಎಂದು ಮನು ಪ್ರಶ್ನಿಸಿದ.

ಆಕೆಯ ಬಿಡಿಸಿದ ಬಲಗೈ ಬಿಗಿಮುಷ್ಟಿಯಾಯಿತು. ಮಿಂಚಿನಂತೆ ಮಹಾತಾಯಿಯ ಕಣ್ಣುಗಳಲ್ಲಿ ಬೆಳಕು ಹುಟ್ಟಿತು.

              " ಛಲ. ಬದುಕಲೇಬೇಕೆಂಬ ಛಲ ಎಂದಳು".

                                       ನನ್ನ ಹಸಿವಿಗಿಂತಲೂ ಕಂದನ ಅಳು ನನ್ನ ಹೊಟ್ಟೆಯನ್ನು ಕೊರೆಯುತ್ತಿತ್ತು. ಅವರೇನೋ ದುರ್ಭಾಗ್ಯಳೆಂದು ಹೊರಗಟ್ಟಿದರು. ಆದರೆ ಈ ಕಂದನಿಗೆ ಬೇಕು-ಬೇಡ, ಇಷ್ಟಾನಿಷ್ಟಗಳೆಲ್ಲವೂ ನಾನೇ ಆಗಿದ್ದೆ. ಜಗವನ್ನು ಅರಿಯದವಳ ಜವಾಬ್ದಾರಿ ನನ್ನದೆಂದು ತೋರಿತು. ಅವಳ ಒಂದು ಹೊತ್ತಿನ ತುತ್ತಿಗಾದರೂ ನನ್ನ ಜೀವನವನ್ನು ಹೋರಾಟ ರೂಪದಲ್ಲಿ ಶುರುವಾಗಿಸಲೇ ಬೇಕಿತ್ತು ಎನ್ನುತ್ತಾ ಎದ್ದುನಿಂತು ಅಲ್ಲೇ ಇದ್ದ ಮಗುವನ್ನು ಸಂತೈಸುತ್ತ ಎತ್ತಿಕೊಂಡಳು. ಮನುವಿನ ಕಡೆ ನೋಡಿ "ಜೀವನ ಮುಗಿಯುವುದು ಜೀವ ಕೊನೆಯಾದಾಗ". ಯಾರ ಜೀವನದಲ್ಲಿ ಕಷ್ಟಗಳೇ ಇಲ್ಲ?. ಸರಮಾಲೆಯೇ ಇರದಿದ್ದರೂ ಮಣಿಯಷ್ಟಾದರೂ ಇರುತ್ತೆ. ಇದು ರೋಷಾವೇಷಗಳ ಹೋರಾಟವಲ್ಲ. ನಾಳೆಯ ಬೆಳಕನ್ನು ಕಾಣಲು ಮಾಡುವ ನಿರಂತರ ಛಲದ ಹೋರಾಟ. ಇಲ್ಲಿ ಅವಿಶ್ವಾಸಕ್ಕೆ ಜಾಗವಿರಕೂಡದೆಂದು ನಕ್ಕಳು ಸುಮ್ಮನಾದಳು.

                           ಮನು ಕೈಮುಗಿದು ಎದ್ದುನಿಂತು ಮಾತುಗಳಿಗೆ ಧನ್ಯವಾದ ಹೇಳಿದ. ತಾತ ನಿಮ್ಮ ನಿತ್ಯ ಕೆಲಸಕ್ಕೆ ತೊಂದರೆಯಾಗಲಿಲ್ಲವಷ್ಟೇ ಎಂದು ಕೇಳಿದರು. ಆಕೆ ಮನುವಿಗೆ "ಬದುಕು ಚಿನ್ನ ಮಗೂ, ಅದು ಕೊಚ್ಚೆಯಲ್ಲಿರಲಿ ಅಥವಾ ಅರಮನೆಯಲ್ಲಿರಲಿ" ಎಂದು ಹೇಳುತ್ತಾ ಬೀಳ್ಕೊಡುಗೆಯ ಮಾತನ್ನು ಮುಗಿಸಿದಳು. ಮಗುವನ್ನು ಸೊಂಟದ ಮೇಲೆ ಕೂರಿಸಿಕೊಂಡು ಎಲ್ಲೋ ಮಧ್ಯಾಹ್ನದ ತುತ್ತಿಗೆ ಹೋರಾಟವನ್ನು ಆರಂಭಿಸಿ ಹೊರಟುಹೋದಳು.

                                         ಅಲ್ಲಿಗೆ ಹೋಗುವಾಗ ಏನು, ಎತ್ತವೆಂದು ಅರಿಯದಿದ್ದ ಮನು ತಾತನ ಮುಖ ನೋಡಿ ನಕ್ಕ. ಬೆಳಗಿನ ಉಪಹಾರ, ಹಿಂದಿನ ರಾತ್ರಿಯ ಊಟವೂ ಆಗಿರಲಿಲ್ಲವಾದ್ದರಿಂದ ಬೇಗ ಮನೆಗೆ ನಡೆಯೋಣವೆಂದ. ತಾತನ ಯೋಜನೆಯೇ ಬೇರೆಯಿತ್ತು. ಮುಂದೆ ಸಿಗುವ ಎರಡಂತಸ್ತಿನ ಮನೆಯ ಕಡೆ ಹೋಗೋಣವೆಂದರು.

                               ಆ ಮನೆ ಹೊರಗಿನಿಂದ ನೋಡಲು ಭವ್ಯವಾಗಿದೆ. ಅದರ ಗೇಟಿಗೊಬ್ಬ ಬಾಗಿಲು ತೆರೆಯಲು ಕಾವಲುಗಾರ. ಆವರಣದ ಒಳಹೊಕ್ಕರೆ ನಾಲ್ಕೈದು ದೊಡ್ಡ ಕಂಪನಿಯ ಕಾರುಗಳು ಮನೆಯ ಮುಂದೆ ನಿಂತಿದ್ದವು. ತಾತನ ಪರಿಚಯವಿರುವುದರಿಂದ ಮನೆ ಮಾಲೀಕನೇ ಬಂದು ಬರಮಾಡಿಕೊಂಡು ಉಪಹಾರಕ್ಕೆ ಆಮಂತ್ರಿಸಿದ. ಮನುವಿಗೆ ಒಳಕ್ಕೆ ಹೆಜ್ಜೆ ಇಡುತ್ತಲೇ ಯಾವುದೋ ಅರಮನೆಯ ಹೊಕ್ಕ ಅನುಭವವಾಯಿತು. ಅಲ್ಲಿಯ ಪ್ರತಿಯೊಂದು ಅಂಶಗಳೂ ಸಂಭ್ರಮವನ್ನೇ ಹೇಳುತ್ತಿದ್ದವು.ಯಾವುದನ್ನು ತಿನ್ನಬೇಕೆಂದು ಗೊಂದಲವಾಗುವಷ್ಟು ಬಗೆಬಗೆಯ ತಿನಿಸುಗಳು ಬೆಳ್ಳಿಯ ಬಟ್ಟಲಲ್ಲಿ ಬಂದು ಕುಳಿತವು. ಬೇಕಾದಷ್ಟು ತಿಂದು ಔಪಚಾರಿಕ ಮಾತು ಮುಗಿಸಿ ಅಲ್ಲಿಂದ ಮನೆಗೆ ಹೊರಟರು. ಮಾಲೀಕ ಅಷ್ಟು ಶ್ರೀಮಂತಿಕೆಯನ್ನು ಹೊಂದುವ ಮೊದಲು ಉದ್ಯಮದಲ್ಲಿ ಅನುಭವಿಸಿದ ಕಷ್ಟಗಳ ಕಥೆಯನ್ನು ತಾತ ಮನುವಿಗೆ ದಾರಿಯಲ್ಲಿ ಹೇಳಿದರು.

                   ಮನೆಗೆ ಬಂದರೂ ಮನು ನಿನ್ನೆ ಕೂತ ಕಟ್ಟೆಯ ಮೇಲೆಯೇ ಕೂತಿದ್ದ. ಅವನೆದುರಿಗೆ ಸ್ವಲ್ಪ ದೂರದಲ್ಲಿ ತಾತ ಕುರ್ಚಿ ಹಾಕಿ ಕುಳಿತುಕೊಂಡರು. ನಿನ್ನೆ ಒಂದೂ ಮಾತನಾಡದ ತಾತ ಈಗ ಹೇಳತೊಡಗಿದರು.
ನಾನು ಓದಿದ್ದು ಒಂದನೇ ಕ್ಲಾಸು. ಈಗಲೂ ಖುಷಿಯಿಂದ ಬದುಕಿದ್ದೇನೆ ಎಂದು ಆರಂಭವಾಯಿತು. ಪ್ರತಿಯೊಬ್ಬರಿಗೂ ಜೀವನದೆಡೆಗೆ ಅವರಿಗಿರುವ ದೃಷ್ಟಿಕೋನವು ಅವರ ಜೀವನವನ್ನು ರೂಪಿಸುತ್ತದೆ. ಅದರ ಕಾರಣದಿಂದಲೇ ಒಬ್ಬರ ಜೀವನ ಇನ್ನೊಬ್ಬರಿಗಿಂತ ಭಿನ್ನ. ಅದು ನಾವು ನಡೆಯುವ ದಾರಿಯನ್ನು ನಿರ್ಮಿಸುತ್ತದೆ. ಗುರಿಯನ್ನು ತೋರಿಸುತ್ತದೆ. ಹೋರಾಡಿ ಮುಂದೆ ಸಾಗಿದ ಅನುಭವವನ್ನು ಒಮ್ಮೆ ಸಂಭ್ರಮದ ರೂಪದಲ್ಲಿ ಅನುಭವಿಸುವಂತೆ ಮಾಡುತ್ತದೆ. ಜೀವನವನ್ನು ಹತಾಶೆ ಎಂದು ಭಾವಿಸಿದರೆ ಪ್ರಪಂಚವೇ ತಲೆ ಮೇಲೆ ಬೀಳುವುದು. ಮಾರ್ಗ ಮುಚ್ಚಿ ಹೋದಾಗ ಮಾತ್ರ ಹೊಸ ದಾರಿಯ ಅನ್ವೇಷಣೆ ಸಾಧ್ಯವಲ್ಲವೇ? ಎಂದು ಕೇಳಿ ಸುಮ್ಮನಾದರು..

                     ಮನು ಯೋಚನಾ ಸಮುದ್ರದಲ್ಲಿ ಮುಳುಗಿದ್ದ. ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಧನಾತ್ಮಕ ವಿಚಾರ ಪ್ರಭಾವ ಬೀರುತ್ತದೆ. ಪರಿಶ್ರಮ ಹಾಗೂ ವಿಶ್ವಾಸದ ಅಗತ್ಯವಂತೂ ಪ್ರತಿಯೊಂದು ಹಂತದಲ್ಲೂ ಅತ್ಯಗತ್ಯ. ಪ್ರತಿಯೊಂದು ಕಷ್ಟಕ್ಕೆ ಕೊನೆಯಲ್ಲೊಂದು ಸಂಭ್ರಮವಿರುತ್ತದೆ. ಈಗ ಸಂಭ್ರಮವಿದ್ದರೆ ಅದರ ಹಿಂದೆ ಅನುಭವಿಸಿದ ಕಷ್ಟಗಳ ಮಾಲೆಯಿರುತ್ತದೆ. ಆದ್ದರಿಂದ ಜೀವನವು ಹೋರಾಟವೂ ಅಲ್ಲ ಸಂಭ್ರಮವೂ ಅಲ್ಲ. ಸಂಭ್ರಮಕ್ಕಾಗಿ ಹೋರಾಟ ಎಂದು ನಿರ್ಧರಿಸಿ ಯೋಚನೆಯನ್ನು ನಿಲ್ಲಿಸಿದ. ಆಗ ಅವನಲ್ಲಿ ಫಲಿತಾಂಶದ ಪ್ರಭಾವವೆಲ್ಲ ಕರಗಿ ಉತ್ಸಾಹವಾಗಿ ಚಿಮ್ಮುತ್ತಿತ್ತು. ಅಂದಿನಿಂದ ಆತನ ಜೀವನದ ಹೊಸ ಅಧ್ಯಾಯವೊಂದು ಆರಂಭವಾಯಿತು.

Comments

Popular posts from this blog

ಅನಿಶ್ಚಿತ

ಸಮಯ ಸಮಸ್ಯೆ?

ನಗುವರಿಯದ ಮುಖ..

ಆದ್ಯತೆ ( priority )

ಅಮ್ಮ

ಮರುಳು ಜೀವನ

ಕೆಂಪು ಮಣ್ಣಿನ ನೆಲ

ಚಂಚಲ