ಅನಿಶ್ಚಿತ

ಅಮ್ಮನ ಕಾಲಿಗೆ ನಮಸ್ಕರಿಸುತ್ತಿದ್ದೆ. ಹೊರಗಿನಿಂದ ಗಡುಸಾದ ಭಾವಪೂರಿತ ಅಪ್ಪನ ಧ್ವನಿ ಕೇಳಿಸಿತು.

"ಇನ್ನೂ ಎಷ್ಟು ಹೊತ್ತು... ಈಗಾಗಲೇ ಹೊರಡಲು ತಡವಾಗುತ್ತಿದೆ"...

ಹೊರಗೆ ಹೋದಾಗ ಅಪ್ಪ ಕಳವಳಗೊಂಡಿದ್ದು ಕಾಣಿಸಿತು. ಆತನ ಮುಖದಲ್ಲಿ.

ಅಪ್ಪ, ನಿಮಗೂ ಚಿಂತೆಯೇ... ದೂರದ ಊರಿಗೇನೋ ಹೊರಟಿರುವುದು ನಿಜ. ಆದರೆ ನಾನೇನು ಒಬ್ಬನೇ ಹೋಗುತ್ತಿಲ್ಲವಲ್ಲ. ನನ್ನ ಜೊತೆಗೆ ಗಾರ್ಗಿಯೂ ಬರುತ್ತಿದ್ದಾಳೆ. ಇಬ್ಬರೂ ಒಟ್ಟಿಗೆ ಹೋಗುತ್ತಿದ್ದೇವೆ. ಕೆಲಸಗಳಲ್ಲಿಯೂ, ರೈಲು ಹತ್ತಿ ತಿರುಗಿ ಬರುವತನಕವೂ ಇಬ್ಬರೂ ಜೊತೆಗಿರಲಿದ್ದೇವೆ. ಈ ಐದಾರು ತಿಂಗಳು ಒಬ್ಬರಿಗೊಬ್ಬರು ಸಹಾಯಕರಾಗಿರುತ್ತೇವೆ. ನಿನ್ನೆ ಮಾತ್ರ ಇದೆಲ್ಲವನ್ನೂ ಹೇಳಿದ್ದೇನಲ್ಲವೇ... ಹಾಗಿದ್ದರೂ ಆತಂಕವೇಕೆ... ಎಲ್ಲವೂ ಸುಗಮವಾಗಿಯೇ ಮುಗಿಯುತ್ತದೆ. ಹೋಗಿ ಬರುತ್ತೇನೆ ಆಶೀರ್ವದಿಸಿ ಎಂದಾಗ ತಲೆಯ ಮೇಲೆ ಕೈಯಾಡಿಸಿದರು.

ಹಿಂದಿನಿಂದ ಅಮ್ಮ, 'ಅವಳು ಹೆಣ್ಣು ಮಗಳು. ನೀನು ಒರಟ. ಅವಳ ಮನಸ್ಸನ್ನು ನೋಯಿಸಬೇಡ. ಸಮಯ ಮಾಡಿಕೊಂಡು ಆಗಾಗ ಕರೆ ಮಾಡುತ್ತಿರಿ. ಪ್ರಯಾಣ ಸುಖಕರವಾಗಿರಲಿ, ಕ್ಷೇಮವಾಗಿ ಹಿಂತಿರುಗಿ' ಎಂದ ಅವಳ ಮಾತುಗಳೊಂದಿಗೆ ಅಪ್ಪನ ಅಂತರಾಳವು ಸೇರಿರುವುದನ್ನು ಅವನ ಕಣ್ಣುಗಳಿಂದ ಗೊತ್ತುಮಾಡಿಕೊಂಡೆ.

ಹೊರಗೆ ಬಂದೆ. ಬಾಡಿಗೆಗೆ ಹೇಳಿ ತರಿಸಿದ್ದ ಕಾರು ನಿಂತಿತ್ತು. ನನ್ನ ಐದಾರು ತಿಂಗಳ ಪ್ರಯಾಣದ ಲಗೇಜುಗಳನ್ನು ಅದಕ್ಕೆ ತುಂಬಿ ಒಲ್ಲದ ಮನಸ್ಸಿನಿಂದ ನನ್ನನ್ನು ಬಿಳ್ಕೊಟ್ಟರು.

ಆಗಿನ್ನು ಕಪ್ಪು. ಬೆಳಗಿನ ಜಾವ 5:30 ಗಂಟೆ. ಡಿಸೆಂಬರ್ ತಿಂಗಳಿನ ಸಮಯ. ಹೊರಗೆ ಸಾಕಷ್ಟು ಚಳಿ ಬೇರೆ. ಆದರೂ ಕಾರಿನ ಗ್ಲಾಸನ್ನು ಏರಿಸಿರಲಿಲ್ಲ. ಕಾರು ಚಲಿಸುತ್ತಿರುವಾಗ ಬರುತ್ತಿರುವ ಶೀತದ ಗಾಳಿ ಮುಖಕ್ಕೆ ಬಡಿದು ಹೊಟ್ಟೆಯೊಳಗಿನ ಕರುಳು ನಡುಗುತ್ತಿತ್ತು. ಕಣ್ಣು ಮುಚ್ಚಿ ಕುಳಿತಿದ್ದೆ. ಈ ಗಾರ್ಗಿ ನನ್ನ ಗೆಳತಿ. ಕಾಲೇಜಿನ ಮೊದಲ ದಿನದಿಂದಲೂ ಪರಿಚಿತಳು. ಸೌಮ್ಯ ಸ್ವಭಾವ, ಬುದ್ಧಿವಂತೆ, ಮಾತು ಕಡಿಮೆ, ಹಸನ್ಮುಖಿ, ನನ್ನಂತೆಯೇ ಅಂತರ್ಮುಖಿಯೂ ಕೂಡ. ಅವಳನ್ನು ನಾನು ನೋಡಿ ಎರಡು-ಮೂರು ವರ್ಷಗಳೇ ಕಳೆದು ಹೋಗಿವೆ. ಆದರೀಗ ಮತ್ತೊಮ್ಮೆ ಅಂದಿನ ದಿನಗಳಂತೆಯೇ ಒಟ್ಟಿಗೆ ಬೆರೆಯುವ ಸಮಯ ಬರುತ್ತಿದೆ. ಒಟ್ಟಿಗೆ ಕುಳಿತು ಓದುವ ಸಮಯ ಎಂದು ಅಂದುಕೊಳ್ಳುತ್ತಿರುವಾಗ ಕಾರ್ ಡ್ರೈವರ್ ಕರೆದ. 'ರೈಲ್ವೆ ಸ್ಟೇಷನ್ ಬಂತು ಸರ್' ಎಂದ.ಆಗ ಕೈ ಗಡಿಯಾರ ನೋಡಿದೆ.ಸಮಯ ವಿಮಾನಕ್ಕಿಂತ ವೇಗವಾಗಿತ್ತು. ಏಳು ಗಂಟೆಯಾಗಿಹೋಗಿತ್ತು. 'ಎಷ್ಟು ಹಣ ಕೊಡಬೇಕು' ಎಂದು ಕೇಳಿದೆ. 'ಅಪ್ಪ ಮನೆಯಿಂದ ಹೊರಡುವಾಗಲೇ ಕೊಟ್ಟು ಕಳುಹಿಸಿದ್ದಾರೆ ನೀವು ಮತ್ತೆ ಕೊಡಬೇಕೆಂಬ ಅವಶ್ಯಕತೆ ಇಲ್ಲ' ಎಂದ.ಅಪ್ಪನ ನೆನಪು ಯಾಕೋ ಜೋರಾಗಿಯೇ ಕಾಡತೊಡಗಿತು. ಅಷ್ಟರಲ್ಲಿ ಹೊರಗೆ ಗಾರ್ಗಿ ಕಾಣಿಸಿದಳು. ತುಸು ಗಡಿಬಿಡಿಯಿಂದ ನಾನಿದ್ದಲ್ಲಿಗೆ ಬಂದು.  'ಬೇಗ ಬಾ ಮಾರಾಯ, ಇನ್ನೂ ತಡ ಮಾಡಿದರೆ ನಮ್ಮ ರೈಲು ಹೊರಟು ಹೋಗುತ್ತದೆ. ವಾರಣಾಸಿಯ ಕಥೆ ಈ ರೈಲ್ವೆ ನಿಲ್ದಾಣದಲ್ಲಿಯೇ ಕೊನೆಗೊಳ್ಳುತ್ತದೆ' ಎಂದು ಹೇಳಿದಳು.
ಆತುರಾತುರದಲ್ಲಿ ಲಗೇಜೆಲ್ಲವನ್ನೂ ಕಾರಿನಿಂದ ಇಳಿಸಿ ನೇರವಾಗಿ ರೈಲಿಗೆ ಸಾಗಿಸಿದೆ. ಕಾರಿನ ಡ್ರೈವರನೂ,ಗಾರ್ಗಿಯೂ ಕೈಜೋಡಿಸಿದರು.

ಮೂರು ದಿನಗಳ ರೈಲು ಪ್ರಯಾಣ. ನನ್ನ ಎದುರಿನ ಸೀಟಿನಲ್ಲಿ ಗಾರ್ಗಿ ಕುಳಿತಿದ್ದಳು,ಅದೇ ಹಳೆಯ ನಗುಮುಖದೊಂದಿಗೆ. ಆದರೆ ಅವಳು ಮೊದಲಿನಂತಿರಲಿಲ್ಲ, ಸ್ವಲ್ಪ ದಪ್ಪಗಾಗಿ ಕೆನ್ನೆಗಳಲ್ಲ ಊದಿಕೊಂಡಿದ್ದವು.'ರೈಲು ನಿಲ್ದಾಣದವರೆಗೆ ಬೀಳ್ಕೊಡಲು ಯಾರು ಬಂದಿದ್ದರು' ಎಂದು ಕೇಳಿದೆ.
'ಅಪ್ಪ ಅಮ್ಮ ಇಬ್ಬರೂ ಬಂದಿದ್ದರು, ಜೊತೆಗೆ ತಮ್ಮನು ಬಂದಿದ್ದ'.
'ಓಹೋ.... ಇಡೀ ಕುಟುಂಬವೇ ಬಂದ ಹಾಗಾಯಿತು' ಎಂದೆ.
'ಅಕ್ಕನನ್ನು ಮರೆತುಬಿಟ್ಟೆಯಾ'....
ತಥ್... ಎಂದು ಹಲ್ಲು ಕಚ್ಚಿ ನನ್ನ ಮರೆವಿಗಿಷ್ಟು ಎಂದು ಮನದೊಳಗೆ ಬೈದುಕೊಂಡೆ. 'ಯಾಕೆ ಮೊದಲೇ ಹೊರಟು ಹೋದರು?'
'ಯಾರಿಗೆ ಸಮಯವಿದೆ?.. ಅಪ್ಪನಿಗೆ ಆಫೀಸು.. ತಮ್ಮನಿಗೆ ಕಾಲೇಜು... ಅಮ್ಮನಿಗೆ ಮನೆ ಕೆಲಸ...'
ಹೀಗೇ ಮಾತು ಸ್ವಲ್ಪ ಸಮಯ ಮುಂದುವರೆಯಿತು. ಆಮೇಲೆ ಏನು ತೋರದೆ ಸುಮ್ಮನಾದೆವು.

ಸ್ವಲ್ಪ ಹೊತ್ತಿನ ನಂತರ, ಏನು ಮಾಡುವುದು ಮೂರು ದಿನ ಈ ಓಡುತ್ತಿರುವ ನಿಲ್ಲುವ ಮತ್ತೆ ಓಡುವ ಉಗಿಬಂಡಿಯಲ್ಲಿ ... ಎಂದು ಅನಿಸುತ್ತಿರುವಾಗ ಮತ್ತೆ ಎದುರಿನ ಸೀಟಿನಲ್ಲಿ ಕುಳಿತಿದ್ದ ಗಾರ್ಗಿಯನ್ನು ನೋಡತೊಡಗಿದೆ. ಅವಳಾಗಲೇ ಯಾವುದೋ ಪುಸ್ತಕವನ್ನು ತೆಗೆದು ಓದತೊಡಗಿದ್ದಳು. ತಕ್ಷಣ ಮುಂದಿನ ಮೂರು ದಿನ ಕಳೆಯುವ ಉಪಾಯ ನನಗೂ ಕಾಣಿಸಿತು.

ಕೊನೆಯ ಅರ್ಧ ದಿನದ ಪ್ರಯಾಣ ಬಾಕಿ ಇರುವಾಗ ಒಂದು ಮಧ್ಯಾಹ್ನ ನಾವು ಕುಳಿತಲ್ಲಿಗೆ ಒಬ್ಬ ಹೆಂಗಸು ಬಂದಳು. ಭಿಕ್ಷೆ ಕೇಳಲು. ದೂರ ಪ್ರಯಾಣದ ಸಮಯದಲ್ಲಿ ಸಾಕಷ್ಟು ಹಣವನ್ನು ಕಿಸೆಯಲ್ಲಿಟ್ಟು ಓಡಾಡುವುದು ಸರಿಯಲ್ಲವೆಂದು ಹತ್ತಿಪ್ಪತ್ತು ರೂಪಾಯಿಗಳನ್ನು ಮಾತ್ರ ಇರಿಸಿಕೊಂಡಿದ್ದೆ. ಬಂದವಳಿಗೆ ಏನು ಕೊಡುವುದೆಂದು ತಿಳಿಯದೇ ಬ್ಯಾಗಿನಲ್ಲಿದ್ದ ಎರಡು ಸೇಬು ಒಂದು ಬಾಳೆಹಣ್ಣನ್ನು ಅವಳ ಕೈಗಿಟ್ಟೆ. 'ಅಣ್ಣ ದುಡ್ಡು ಕೊಡಿ' ಅಂದಳು. ಆಗದು ಎಂಬಂತೆ ತಲೆಯಾಡಿಸಿದೆ. ಒಂದು ಕ್ಷಣ ದುರಗುಟ್ಟಿಕೊಂಡು ನನ್ನನ್ನೇ ನೋಡಿದಳು. ನಂತರ ಕೈಯಲ್ಲಿದ್ದ ನಾನು ಕೊಟ್ಟ ಹಣ್ಣುಗಳನ್ನು ನನ್ನ ಮುಖಕ್ಕೆ ಎಸೆದು ಏನೋ ಗೊಣಗಿಕೊಳ್ಳುತ್ತಾ ಸಿಟ್ಟಿನಿಂದ ಹೊರಟು ಹೋದಳು.

ನನಗೆ ಅವಾಕ್ಕಾಯಿತು. ಬೇಸರವೂ ಆಯಿತು. ಏನು ಧಿಮಾಕಿನ ಹೆಂಗಸು. ಮಾಡುತ್ತಿರುವ ಕೆಲಸ ಭಿಕ್ಷೆ ಬೇಡುವುದಾದರೂ ಸೊಕ್ಕು ಮಾತ್ರ ಹೇಳತೀರಲಾಗದಷ್ಟಿದೆ. ಕೊಡಬಾರದ್ದನ್ನೇನು ನಾನು ಕೊಟ್ಟೆ ಎಂದು ಅಂದುಕೊಳ್ಳುತ್ತಿರುವಾಗ ಇದೆಲ್ಲವನ್ನೂ ನೋಡುತ್ತಿದ್ದ ಗಾರ್ಗಿ ನಗಾಡುತ್ತಾ ಕೆಳಗೆ ಬಿದ್ದ ಹಣ್ಣುಗಳನ್ನು ಎತ್ತಿ ಒರೆಸುತ್ತಾ ನನ್ನ ಕೈಗಿಟ್ಟು ಹೀಗೆ ಹೇಳಿದಳು. 'ಚಿಂತೆ ಮಾಡಬೇಡ.. ದುಷ್ಟ ಮನಸ್ಸಿನ ರಾವಣ ಕೊಲ್ಲಲ್ಪಟ್ಟ ಅವನಿಗೆ ದಾನವನ್ನು ಕೊಟ್ಟ ಸೀತಾ ಮಾತೆ ಮಹಾಪತಿವ್ರತೆಯಾದಳು, ಭಿಕ್ಷೆ ಬೇಡಿದ ಮನೆಯ ಸಂಕಟಕ್ಕೆ ಮಾತಾಗಿ ಭೀಮಸೇನ ಬಕಾಸುರನನ್ನೇ ಕೊಂದ. ಶಂಕರರು ಭಿಕ್ಷೆ ಪಡೆದ ಮನೆಯಲ್ಲಿ ಸುವರ್ಣದ ಮಳೆಯನ್ನೇ ಸುರಿಸಿದರು. ಇದೇ ರೀತಿ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಕೊಡುವ ಮನಸ್ಸದಾಗ ಕೊಟ್ಟುಬಿಡು. ಸ್ವೀಕರಿಸುವುದು ತಿರಸ್ಕರಿಸುವುದು ಕೇಳಿದವನ ಇಚ್ಛೆ. ನಾವು ಕೊಟ್ಟದ್ದನ್ನು ಸ್ವೀಕರಿಸುವವನಿಗೂ ಯೋಗ್ಯತೆ ಇರಬೇಕಾಗುತ್ತದೆ. ಗೀತೆಯಲ್ಲೂ ಅಪಾತ್ರರಿಗೆ ಮಾಡುವ ದಾನ ತಾಮಸಿಕವೆಂದು ಹೇಳಿದ್ದಾರಲ್ಲವೇ' ಎಂದೇನೇನೋ ಹೇಳುತ್ತಿದ್ದಳು. ನಾನು ಆ ಹೆಂಗಸಿನ ವರ್ತನೆಯಿಂದ ಬಹಳ ನೊಂದುಕೊಂಡೆ ಎಂದು ಆಕೆಗೆ ಅನಿಸಿರಬೇಕು. ನಾನು ಆ ಕ್ಷಣ ಆಕೆ ಹೋದ ಕಡೆಗೆ ನೋಡುತ್ತಾ ನನ್ನ ಯೋಚನೆಗಳೊಳಗೆ ಕಳೆದು ಹೋಗಿದ್ದೆ.  ಸ್ವಲ್ಪ ಹೊತ್ತಿನ ನಂತರ ಸಮಾಧಾನವಾಯಿತು, ಗಾರ್ಗಿಯ ಮಾತುಗಳಿಂದಲೂ ನನ್ನ ಯೋಚನೆಗಳಿಂದಲೂ..

ತಲುಪಿದಾಗ ಸಂಜೆಯಾಗಿತ್ತು. ರೈಲಿನಿಂದ ಇಳಿದು ಆಟೋ ಹತ್ತಿ ನಮ್ಮ ಆರು ತಿಂಗಳ ವಾಸಸ್ಥಾನಕ್ಕೆ ಹೊರಟೆವು. ಪರಿಚಯದವರೊಬ್ಬರು ದಶಾಶ್ವಮೇಧ ಘಾಟಿನಿಂದ ಸ್ವಲ್ಪೇ ದೂರದಲ್ಲಿ  ನಮಗಿಬ್ಬರಿಗೂ ಒಂದೊಂದು ರೂಮನ್ನು ಕಾಯ್ದಿರಿಸಿದ್ದರು. ಅದು ಅಷ್ಟೇನೂ ದೊಡ್ಡದಾಗಿರಲಿಲ್ಲ. ಆದರೆ ಕಲಾತ್ಮಕವಾಗಿಯೂ,ಶಾಂತವಾಗಿಯೂ ಇತ್ತು. ನಮಗಿಬ್ಬರಿಗೂ ಹಿಡಿಸಿತು.

ದಿನಗಳು ಕಳೆದವು. ನಾವು ಅಲ್ಲಿಗೆ ಹೋದ ಉದ್ದೇಶದ ಕೆಲಸಗಳು ಆರಂಭವಾಗಿದ್ದವು. ಒಂದು ದಿನ ನಾನೇಕೋ ಒಬ್ಬನೇ ತಿರುಗಾಡಲು ಹೋಗಿದ್ದೆ. ರಾತ್ರಿ ಬರಲು ತಡವಾಯಿತು. ಗಾರ್ಗಿ ತನ್ನಲ್ಲಿಗೆ ಊಟಕ್ಕೆ ಬರಬೇಕು, ಎಲ್ಲವೂ ಸಿದ್ಧವಾಗಿದೆ ಎಂದು ಕರೆದಳು. ಅಮೃತ ಸಿಕ್ಕಂತಾಯಿತು. ಹೊಟ್ಟೆ ತುಂಬ ಊಟ ಮಾಡಿದೆ. ಆ ದಿನದಿಂದ ನಾನು ವಾರಣಾಸಿ ಬಿಟ್ಟು ಬರುವವರೆಗೂ ಅವಳಲ್ಲಿಯೇ ಊಟಕ್ಕೆ ಹೋಗುತ್ತಿದ್ದೆ. ನಾನೆಂದೂ ಮತ್ತೆ ನನ್ನ ಕೋಣೆಯ ಒಲೆಯನ್ನು ಹೊತ್ತಿಸಲಿಲ್ಲ. ತುಂಬಾ ಹಸಿವಿನಿಂದ ಕಾಯುತ್ತಿದ್ದ ನನಗೆ ಅವಳು ಒಮ್ಮೊಮ್ಮೆ ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ಆಗುತ್ತಿದ್ದಳು. ಅಡುಗೆ ರುಚಿಯಲ್ಲಿಯೂ,ಹೊಟ್ಟೆ ತುಂಬ ಬಡಿಸುವಲ್ಲಿಯೂ...

ನನ್ನ ಸಂಪೂರ್ಣ ದಿನಗಳನ್ನು ಅವಳ ಕೋಣೆಯಲ್ಲಿಯೇ ಕಳೆಯತೊಡಗಿದೆ. ರಾತ್ರಿ ಮಲಗಲೊಂದು ನನ್ನ ಕೋಣೆಗೆ ಹಿಂದಿರುಗುತ್ತಿದ್ದೆ. ಇಡೀ ದಿನ ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಕುಳಿತಿದ್ದರೂ ಮಾತನಾಡುತ್ತಿರಲಿಲ್ಲ. ಏನಾದರೂ ಪ್ರಮುಖ ಚರ್ಚಿಸುವ ವಿಷಯಗಳಿದ್ದಲ್ಲಿ ಮಾತ್ರ ನಮ್ಮ ಕಣ್ಣುಗಳು ಮಾತುಗಳು ಸಂಧಿಸುತ್ತಿದ್ದವು. ಅದರ ಹೊರತಾಗಿ ನಡುವೆ ಇರುವ ಮೌನದಲ್ಲಿ ಕೀಲಿಮಣೆಯ ಶಬ್ದಗಳು ಏನು ಮಾತನಾಡುವಂತೆ ಕೇಳಿಸುತ್ತಿರುತ್ತಿದ್ದವು.

ಆಗಾಗ ಅಲ್ಲಿನ ಜನನಿಬಿಡ ಬೀದಿಗಳಲ್ಲಿ ತಿರುಗಾಡಲು ಹೋಗುತ್ತಿದ್ದೆವು. ಸಂಜೆಯ ವೇಳೆಗೆ. ಗಾರ್ಗಿಯ ನಡತೆ ತೀರ ಸ್ಥಳೀಯಳೋ ಎಂಬಂತಿರುತ್ತಿತ್ತು. ಒತ್ತೊತ್ತಾಗಿ ನಿಂತಿರುವ ಜನರ ಮಧ್ಯೆ ತನಗೆ ಇಲ್ಲಿನ ಇಂಚಿಂಚೂ ಗೊತ್ತು ಎಂಬಂತೆ ಸರಸರನೆ ನಡೆದು ಕಣ್ಮರೆಯಾಗುತ್ತಿದ್ದಳು. ಕೆಲವೊಮ್ಮೆಯಂತೂ ನಾನು ಅವಳನ್ನು ಕೂಗಿ ಕರೆಯುತ್ತಿದ್ದೆ. ನಿಧಾನ ಗಾರ್ಗಿ....... ನಿಧಾನ...

ವಿಶ್ವನಾಥ ಮಂದಿರದಿಂದ ಆರಂಭವಾಗಿ ವಾರಣಾಸಿಯ ಅಷ್ಟೂ ಸ್ಥಳಗಳನ್ನು ನೋಡಿದ್ದಾಯಿತು. ಗಂಗೆಯಲ್ಲಿ ದೋಣಿ ವಿಹಾರ ಮಾಡುವಾಗಲಂತೂ ಬೀಸುವ ತಂಗಾಳಿಗೆ ಮನಸ್ಸು ಹಾಯೆನಿಸಿ ಗಂಗೆ ನಿಜವಾಗಿಯೂ ಮುಕ್ತಿದಾಯಿನಿಯೇ ಎಂಬುದು ಖಚಿತವಾಗುತ್ತಿತ್ತು. ದೋಣಿಯಲ್ಲಿ ಕೂತು ದೂರದಿಂದ ಬನಾರಸಿನ ಅಷ್ಟೂ ಘಾಟುಗಳ ದರ್ಶನವಾಯಿತು. ದಶಾಶ್ವಮೇಧ ಘಾಟಿನ ಜಗತ್ಪ್ರಸಿದ್ಧ ಗಂಗಾರತಿಯನ್ನು ನೋಡುವಾಗ ಯಾವುದೋ ಬೇರೆ ಲೋಕದ ಅನುಭೂತಿಯಾಗುತ್ತಿತ್ತು. ಪ್ರತಿದಿನವೂ  ನೋಡಿ ಮನ ತುಂಬಿಕೊಳ್ಳಬೇಕೆಂದು ಅನಿಸುತ್ತಿತ್ತು.

ಆಗಾಗ ಮನೆಯಿಂದ ಫೋನು ಕರೆಗಳು ಬರುತ್ತಿದ್ದವು. ಕ್ಷೇಮ ವಿಚಾರಣೆ ನಡೆಯುತ್ತಿತ್ತು. ಒಂದು ದಿನ ರೂಮಿನ ಬಾಗಿಲಿನಲ್ಲಿ ನಿಂತ ಗಾರ್ಗಿ ಇದ್ದಕ್ಕಿದ್ದಂತೆ ಅಳತೊಡಗಿದಳು. ನನಗೆ ಗಾಬರಿಯಾಯಿತು. ಅವಳ ಬಳಿಗೆ ಹೋಗಿ  ಆಕೆಯ ಗಲ್ಲವನ್ನು ಹಿಡಿದು ಕಣ್ಣೀರು ಒರೆಸುತ್ತಾ ಕೇಳಿದೆ ' ಏನಾಯ್ತು ಗಾರ್ಗಿ ಯಾಕೆ ಅಳುತ್ತಿದ್ದೀಯಾ?'.. ಆಕೆ ಕಾರಣವನ್ನೇನೂ ಹೇಳಲಿಲ್ಲ. ನನ್ನ ಒಂದು ಕೈಯನ್ನು ಗಟ್ಟಿಯಾಗಿ ತಬ್ಬುವಂತೆ ಹಿಡಿದುಕೊಂಡಳು. ನನಗೆ ಏನು ಮಾಡಬೇಕೆಂಬುದು ತೋಚದೇ ಅವಳ ತಲೆಯನ್ನು ಮತ್ತೊಂದು ಕೈಯಿಂದ ನೇವರಿಸತೊಡಗಿದೆ. ಸ್ವಲ್ಪ ಹೊತ್ತಿನ ನಂತರ ಮಾತನಾಡಿದಳು. ನನ್ನನ್ನು ರೈಲು ನಿಲ್ದಾಣಕ್ಕೆ ಬಿಟ್ಟು ಹೋಗಲು ಬಂದಾಗ ಎಲ್ಲರ ಕಣ್ಣಿನಲ್ಲಿ ನೀರಿತ್ತು. ನನ್ನನ್ನು ಇಷ್ಟು ದೂರ,ಇಷ್ಟು ದಿನ ಅವರ್ಯಾರು ಬಿಟ್ಟು ಇದ್ದವರಲ್ಲ. ಅಪ್ಪನನ್ನು ನೆನೆದು ನನಗೆ ಅಳು ಬರುತ್ತಿದೆ. ಸರಿಯಾಗಿ ಸುಳ್ಳು ಹೇಳುವುದನ್ನು ಆತ ಇನ್ನೂ ಕಲಿತಿಲ್ಲ. ಕಣ್ಣುಗಳೇಕೆ ಕೆಂಪಾಗಿ ನೀರಿನಿಂದ ತುಂಬಿವೆ ಅಪ್ಪ ಎಂದು ಕೇಳಿದರೆ 'ಕಣ್ಣಲ್ಲಿ ಧೂಳು ಹೊಕ್ಕಿತು ಮಗಳೇ, ಉಜ್ಜಿಕೊಂಡೆ ಹಾಗಾಗಿ ಕೆಂಪಾಗಿವೆ' ಎಂದಿದ್ದ. ಅದೆಲ್ಲವೂ ಈಗ ನೆನಪಿಗೆ ಬರುತ್ತಿದೆ. ಅಪ್ಪ ಇತ್ತೀಚೆಗೆ ಪದೇಪದೇ ನನ್ನ ಫೋಟೋವನ್ನು ನೋಡುತ್ತಾ ಸುಮ್ಮನೆ ಕುಳಿತುಬಿಡುತ್ತಾರಂತೆ, ತುಂಬಾ ನೆನಪು ಕಾಡುತ್ತಿರಬೇಕು ಎಂದು ಇದೀಗ ಕರೆ ಮಾಡಿದ್ದ ಅಮ್ಮ ಹೇಳಿದಳು. ಹೀಗೆ ಹೇಳುತ್ತಾ ಅವಳಿಗೂ ಸ್ವಲ್ಪ ಸಮಾಧಾನವಾಗಿತ್ತು. ಸುತ್ತಾಡಿ ಬರೋಣವೇ?  ಎಂದು ಕೇಳಿದೆ. ಹೂಂ ಎಂದು ಹಿಂದೆಯೇ ಬಂದಳು. ಎಲ್ಲಿಗೆ ಹೋಗುವುದೆಂದು ಯೋಚಿಸುತ್ತಿರುವಾಗ ಹರಿಶ್ಚಂದ್ರ ಘಾಟಿನ ದಾರಿ ಕಾಣಿಸಿತು ಅವಳ ಕೈ ಹಿಡಿದು ಮುನ್ನಡೆದೆ.

ಗಂಗೆಯಲ್ಲಿ ಕಾಲನ್ನು ಇಳಿಯಬಿಟ್ಟು ಕುಳಿತಿದ್ದೆವು.ಅವಳಿಗೆ ಇವತ್ತು ಮಾತನಾಡುವ ಮನಸ್ಸಿರಲಿಲ್ಲ. ನನ್ನ ಭುಜಕ್ಕೊರಗಿದ್ದಳು. ಮೌನದಲ್ಲಿ ದೂರದಲ್ಲಿ ಉರಿಯುತ್ತಿರುವ ಚಿತೆಯನ್ನು ನೋಡುತ್ತಿರುವಾಗ ಕಗ್ಗಕ್ಕೊಂದು ಕೈಪಿಡಿ ಪುಸ್ತಕದ ಸಾಲುಗಳು ನೆನಪಾದವು..

"ನಗುವೊಂದು ರಸಪಾಕವಳುವೊಂದು ರಸಪಾಕ।
ನಗುವಾತ್ಮ ಪರಿಮಳವ ಪಸರಿಸುವ ಕುಸುಮ।।
ದುಗುಡವಾತ್ಮವ ಕಡೆದು ಸತ್ವವೆತ್ತುವ ಮಂತು।
ಬಗೆದೆರಡನುಂ ಭುಜಿಸು - ಮಂಕುತಿಮ್ಮ।।

ಹೊರಗಿನ ಸಂದರ್ಭಗಳನ್ನು ಅನುಭವಿಸಿದಾಗ ನಮ್ಮ ಹೃದಯ ಕೆಲವು ಸಲ ಉಲ್ಲಾಸಗೊಳ್ಳುತ್ತದೆ. ಕೆಲವು ಸಲ ಬೇಯುತ್ತದೆ. ಇವೆರಡೂ ಅನುಭವದ ಪಾಕಗಳು. ಒಂದು ಹೂವು ತನ್ನ ಸುವಾಸನೆಯನ್ನು ಹರಡಿ ಎಲ್ಲರಿಗೂ ಆನಂದವನ್ನು ತರುವಂತೆ ನಗು ನಮ್ಮ ಸುತ್ತಮುತ್ತಲಿನವರಿಗೆ ಸಂತೋಷವನ್ನು ಉಂಟುಮಾಡುತ್ತದೆ. ಕಷ್ಟಕಾರ್ಪಣ್ಯಗಳಾದರೋ ನಮ್ಮ ಪೌರುಷವನ್ನೆಬ್ಬಿಸಿ ನಮ್ಮ ಹೃದಯಮಥನ ಮಾಡಿ ಎದುರಾದ ಸವಾಲಿಗೆ ಸರಿಯಾದ ಉತ್ತರ ಹೇಳಿ, ಅಂತಃಕರಣದ ಸತ್ವದ ದಾರ್ಢ್ಯವನ್ನು ಮೆರೆಯುತ್ತದೆ. ಇವೆರಡೂ ಅಂತಃಕರಣದ ಸಂಸ್ಕಾರಕ್ಕೆ ಬೇಕಾದವು. ಆದ್ದರಿಂದ ಇವೆರಡರಲ್ಲಿ ಯಾವುದನ್ನೂ ಬೇಡವೆನ್ನದೆ ಅವುಗಳ ಸ್ವಾರಸ್ಯವನ್ನು ಸರಿಯಾಗಿ ತಿಳಿದು ಅನುಭವಿಸಬೇಕಾದದ್ದು ಎಂದು ಹೇಳುತ್ತಲೇ ಇದ್ದೆ. ಅವಳು ಅಲ್ಲೇ ನಿದ್ದೆ ಹೋಗಿದ್ದಳು. ಎಬ್ಬಿಸಿ ರೂಮಿಗೆ ನಡೆಸಿಕೊಂಡು ಬಂದೆ.

ದಿನ ಕಳೆದಂತೆ ನನ್ನ ಸ್ವಾಸ್ಥ್ಯ ಹದಗೆಡುತ್ತಿತ್ತು. ತೀರ ತೆಳ್ಳಗಾಗಿದ್ದೆ. ಅಂತರ್ಮುಖಿಯಾಗುತ್ತಿದ್ದೆ. ಚಿತೆಗಳು ಉರಿಯುತ್ತಿರುವುದನ್ನು ನೋಡುತ್ತಿದ್ದರೆ ಸಮಯದ ಅರಿವಾಗುತ್ತಿರಲಿಲ್ಲ. ಯಾವುದೋ ಅಜ್ಞಾತ ಆಲೋಚನಾ ಸರಣಿಯೊಳಗೆ ಸೇರಿ ಹೋಗುತ್ತಿದ್ದೆ.

ವಾರಣಾಸಿಯ ಕೊನೆಯ ದಿನಗಳಲ್ಲೊಂದು ರಾತ್ರಿ ಗಾರ್ಗಿ ನನ್ನ ಕಣ್ಣಿಗೆ ಬಟ್ಟೆ ಕಟ್ಟಿ ಎಲ್ಲಿಗೆ ಎಂದು ಹೇಳದೇ ಕೈಹಿಡಿದು ಕರೆದೊಯ್ದಳು. ಏನೇನೋ ವಿಚಿತ್ರ ಸದ್ದುಗಳು ಕಿವಿಗೆ ಕೇಳಿಸುತ್ತಿದ್ದವು. ಯಾರೋ ಜೋರಾಗಿ ಅಳುತ್ತಿದ್ದರು. ಮೂಗಿಗೆ ಘಾಟು ವಾಸನೆ ಬಡಿಯುತ್ತಿತ್ತು ಬಹುಶಃ ಸುಡುತ್ತಿರುವ ಹೆಣಗಳದ್ದು. ನಾನು ಎಲ್ಲಿಗಿರಬಹುದು ಎಂದು ಯೋಚಿಸುತ್ತಿರುವಾಗಲೇ ನನ್ನ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿದಳು. ಓಹೋ.... ಇದು ಮಣಿಕರ್ಣಿಕಾ ಘಾಟ್... ಸುತ್ತಲೂ ಕಗ್ಗತ್ತಲು. ಅಲ್ಲಲ್ಲಿ ಉರಿಯುತ್ತಿರುವ ಹತ್ತಾರು ಚಿತೆಗಳ ಬೆಳಕು ಕಾಣಿಸುತ್ತಿದ್ದವು. ನಾನು ನಿಂತಲ್ಲಿಂದ ನಾಲ್ಕು ಹೆಜ್ಜೆ ಮುಂದೆ ಬಂದೆ. ತಲೆಸುತ್ತುವಂತಾಯಿತು. ಗಂಗೆಗೆ ಮುಖ ಮಾಡಿ ಮೊಣಕಾಲನ್ನು ನೆಲಕ್ಕೂರಿ ಕುಳಿತೆ. ಜೀವನದ ಸತ್ಯವನ್ನು ನೋಡು, ಬಂಧು ಬಾಂಧವರ ಸ್ನೇಹಿತರ ಸತ್ಯವನ್ನು ನೋಡು ಎಂದು ಚಿತೆಗಳಡೆಗೆ ಕೈ ತೋರಿಸುತ್ತಾ ಹಿಂದಿನಿಂದ ಗಾರ್ಗಿ  .

" ಸಮವರ್ತಿಗಳು ಜಗದೊಳಿಬ್ಬರೇ ದಿಟವರಿಯೆ।
ಯಮರಾಜನೊಬ್ಬ ಜಾಠರ ರಾಜನೊಬ್ಬ।।
ಶ್ರಮವನನುದಿನಮುಮಾಗಿಪನೊಬ್ಬನೆಲ್ಲವನು।
ಶಮಿಸಿ ಮುಗಿಸುವನೊಬ್ಬ ಮಂಕುತಿಮ್ಮ।।
ನಿಜವಾಗಿ ಹೇಳುವುದಾದರೆ ಈ ಲೋಕದಲ್ಲಿ ಸಮನಾಗಿ ಎಲ್ಲರನ್ನೂ ಕಾಣುವವರು ಇಬ್ಬರೇ. ಒಬ್ಬ ಯಮರಾಜ. ಯಾರಿಗೂ ವಿನಾಯಿತಿ ಕೊಡದೆ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾನೆ ಇನ್ನೊಬ್ಬ ಜಠರ ರಾಜ. ಹೊಟ್ಟೆಯ ಹಸಿವು ಯಾರನ್ನು ಬಿಟ್ಟಿದ್ದಲ್ಲ. ಹೇಗಾದರೂ ಮಾಡಿ ಕೆಲಸ ಮಾಡಿಯೋ,ಬೇಡಿಯೋ,ಕದ್ದೋ ಪ್ರತಿಯೊಬ್ಬನೂ ಹಸಿವನ್ನು ತೀರಿಸಿಕೊಳ್ಳಲೇಬೇಕು. ಪ್ರತಿಯೊಬ್ಬನೂ ಪ್ರತಿದಿನವೂ ಯಾವುದಾದರೂ ಒಂದು ವಿಧದ ಶ್ರಮವನ್ನು ಪಡುವಂತೆ ಜಠರರಾಜ ಮಾಡುತ್ತಾನೆ. ಯಮರಾಜನಾದರೋ ಎಲ್ಲರನ್ನೂ ಶಾಂತರನ್ನಾಗಿಸಿ ಕಥೆ ಮುಗಿಸುತ್ತಾನೆ. ಇವರ ಆಳ್ವಿಕೆಯಲ್ಲಿ ಪಕ್ಷಪಾತವಿಲ್ಲ. ಎಂದು ಅವಳು ಓದಿದ್ದನ್ನು ಹೇಳುತ್ತಿದ್ದಳು.. ನನಗೆ ಹೇಳಲಾಗದಂತಹ ವಿಚಿತ್ರ ಅನುಭವವಾಗುತ್ತಿತ್ತು. ಅವಳ ಮಾತಿನೆಡೆಗೆ ಗಮನವಿಲ್ಲದಂತಾಯಿತು. ಕಣ್ಣಿನಲ್ಲಿ ನೀರು ತುಂಬಿಕೊಂಡಿತು. ನಗುವೂ ಅಳುವೂ ಒಟ್ಟೊಟ್ಟಿಗೆ ಬರುತ್ತಿದ್ದವು. ದೂರದಲ್ಲಿ ಉರಿಯುತ್ತಿದ್ದ ಚಿತೆಯ ಬೆಂಕಿ ನನ್ನೆಡೆಗೆ ಬರುವಂತೆ ಕಾಣತೊಡಗಿತು. ಆಕಾಶಕ್ಕೆ ಮುಖ ಮಾಡಿ ಕೈಗಳನ್ನು ಬೇಡುವಂತೆ ಹಿಡಿದೆ. ಮುಖದಿಂದ ಅಪ್ರಯತ್ನಪೂರ್ವಕವಾಗಿ ಉಪನಿಷದ್ವಾಕ್ಯ ಹೊರಟಿತು.

"ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್
           ವಿಶ್ವಾನಿ ದೇವ ವಯುನಾನಿ ವಿದ್ವಾನ್।
ಯುಯೋಧ್ಯಸ್ಮಜ್ಜುಹುರಾಣಮೇನೋ
          ಭೂಯಿಷ್ಠಾಂ ತೇ ನಮಉಕ್ತಿಂ ವಿಧೇಮ।।"
(ಈಶಾವಾಸ್ಯೋಪನಿಷತ್)

[ಅಗ್ನಿಯೇ... ಧನವು ಸಿಕ್ಕುವಂತೆ ನಮ್ಮನ್ನು ಒಳ್ಳೆಯ (ಉತ್ತರಾಯಣ) ಮಾರ್ಗದಿಂದ ಕರೆದುಕೊಂಡು ಹೋಗುವವನಾಗು. ದೇವನೇ, ನೀನು ಎಲ್ಲಾ ಕರ್ಮಗಳನ್ನು ಬಲ್ಲವನು. ನಮ್ಮ ಎಲ್ಲಾ ಪಾಪಗಳನ್ನು ನೀನು ಪರಿಹರಿಸುವವನಾಗು. ನಾವು ನಿನ್ನ ಸೇವೆಯನ್ನು ಮಾಡಲು ಶಕ್ತರಾಗಿಲ್ಲ ಆದ್ದರಿಂದ ಕೇವಲ ನಮಸ್ಕಾರೋಕ್ತಿಗಳಿಂದ ಮಾತ್ರ ಸೇವೆಗೈಯ್ಯುತ್ತೇವೆ.]

ಆಮೇಲೆ ಮೂರ್ಛೆ ಹೋದೆನೇನೋ.....

ಬಿಳಿಯ ವಸ್ತ್ರ ಸುತ್ತಿದ ನನ್ನದೇ ದೇಹವನ್ನು ತುಳಸಿ ಕಟ್ಟೆಯ ಮುಂದಿಟ್ಟಿದ್ದಾರೆ. ಊರಿನ ಜನರು, ಬಳಗದವರೆಲ್ಲ ಬಂದಿದ್ದಾರೆ. ಪುರೋಹಿತರು ಏನೋ ಮಂತ್ರ ಹೇಳುತ್ತಿದ್ದಾರೆ. ಯಾರೋ ದೇಹಕ್ಕೆ ತೀರ್ಥಸ್ನಾನ ಮಾಡಿಸುತ್ತಿದ್ದಾರೆ. ಅವರ್ಯಾರ ಮುಖವು ನನಗೆ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಆದರೆ ಅಲ್ಲಿ ಸ್ವಲ್ಪ ದೂರದಲ್ಲಿ ಅಮ್ಮ ಕುಳಿತಿರುವುದು ಕಾಣಿಸುತ್ತಿದೆ. ಅತ್ತು ಗೋಗರೆದು ಅವಳ ಕಣ್ಣೀರು ಬತ್ತಿ ಹೋದಂತಿದೆ. ಆಕೆಯ ಎಡ ಬಲದಲ್ಲಿ ನನ್ನ ಅಕ್ಕಂದಿರು ಕುಳಿತಿದ್ದಾರೆ. ಅಲ್ಲೇ ಪಕ್ಕದಲ್ಲಿ ಇನ್ನು ಪ್ರಪಂಚವೆಲ್ಲ ಮುಗಿದು ಹೋಯಿತು ಎಂಬ ಭಾವದಿಂದ ಕಣ್ಣೀರು ಬರುತ್ತಿದ್ದರೂ ತಡೆದುಕೊಳ್ಳುತ್ತಿರುವ ಅಪ್ಪ. ಮತ್ತೆ ಎಲ್ಲರ ಮುಖಗಳೂ ಮಸುಕು ಮಸುಕು. ಅಸ್ಪಷ್ಟ. ಅದಾಗಲೇ ಯಾರೋ ನಾಲ್ಕು ಜನ ನನ್ನ ದೇಹವನ್ನು ದೂರ ಹೊತ್ತು ಸಾಗುತ್ತಿದ್ದಾರೆ. ಇನ್ನೇನು ಬೆಂಕಿ ಇಡುತ್ತಾರೆ ಎನ್ನುವಷ್ಟರಲ್ಲಿ ಯಾರೋ ಕರೆಯುವ ಸದ್ದು ನಾನು ದೀರ್ಘ ನಿದ್ರೆಯಿಂದ ಏಳುತ್ತಿರುವಂತಹ ಅನುಭವ. ಎರಡು ಹೆಗಲುಗಳ ಮೇಲೆ ಕೈ ಇಟ್ಟು ಎಚ್ಚರಿಸುತ್ತಿದ್ದಾಳೆ ಗಾರ್ಗಿ. ಅವಳ ಮಾತುಗಳು ನನಗೆ ಪ್ರತಿಧ್ವನಿಯಾಗಿ ಕೇಳಿಸುತ್ತಿವೆ. ಕಣ್ಣು ಬಿಟ್ಟೆ. ಆಕೆಯ ಮುಖದಲ್ಲಿ ಭೀತಿಯಿತ್ತು. ಭಾವಾವೇಶ ಕಾಣಿಸುತ್ತಿತ್ತು. ನಾನು ಮುಗುಳ್ನಕ್ಕೆ. 'ಆಗಿನಿಂದ ಕೂಗಿ ಕೊಳ್ಳುತ್ತಿದ್ದೇನೆ ಗಂಟಲೆಲ್ಲ ಒಣಗಿ ಹೋಯಿತು ನಿನಗೆ ಈ ಲೋಕದ ಪರಿಜ್ಞಾನವೇ ಇಲ್ಲ' ಎಂದು ಸಿಡುಕಿನಿಂದ ಹೇಳಿದಳು. ನನ್ನ ಕಣ್ಣುಗಳಲ್ಲಿ ಅವಳು ಪುನರ್ಜನ್ಮ ಕೊಟ್ಟ ದೇವತೆಯಂತೆ ಕಾಣಿಸತೊಡಗಿದಳು. ನಾನು ಸತ್ತು ಹೋಗಿದ್ದೆನೆ? ಅದು ನನ್ನ ಭ್ರಮೆಯೇ?? ಅವಳು ನಿಜವಾಗಿಯೂ ದೇವತೆಯೇ?? ನಾನಂತೂ ತಿಳಿಯೆ..... ಮನುಷ್ಯಳೇ ಆಗಿದ್ದರೂ ಆಕೆ ನನ್ನ ಜಡ ದೇಹದಲ್ಲಿ ಚೈತನ್ಯವನ್ನು ಸ್ಪುರಿಸಿದ್ದಳು. ನಿಂತ ಜೀವಗಂಗಾ ಪ್ರವಾಹವನ್ನು ಮತ್ತೆ ಹರಿಸಿದ್ದಳು. ತಟಸ್ಥವಾದ ಜಗತ್ತು ಮತ್ತೆ ಚಲಿಸುವಂತೆ ಮಾಡಿದ್ದಳು..

ಮಾಯೆಯ ಬದುಕಿನಲ್ಲೊಂದು ಮಾಯಾವಿ ಅಧ್ಯಾಯದಂತೆ, ಅಸ್ಪಷ್ಟ ದಿನಗಳಲ್ಲೊಂದು ಸ್ಪಷ್ಟ ನೆನಪಿನಂತೆ, ಈ ಅನುಭವ ನನ್ನೊಡನೆ ಚಿರವಾಯಿತು. ಕಲ್ಪನೆಯ ಕಟ್ಟೆಯೋ, ಸತ್ಯದ ದರ್ಶನವೋ ವಾರಣಾಸಿಯ ಈ ಅನುಭವ ಜೀವನದಲ್ಲೊಂದು ಗುರುತಾಯಿತು.


 

Comments

Popular posts from this blog

ಸಮಯ ಸಮಸ್ಯೆ?

ನಗುವರಿಯದ ಮುಖ..

ಆದ್ಯತೆ ( priority )

ಅಮ್ಮ

ಮರುಳು ಜೀವನ

ಕೆಂಪು ಮಣ್ಣಿನ ನೆಲ

ಮನು ಮತ್ತು ತಾತ

ಚಂಚಲ