ಬಿಡುವ ಮುನ್ನ ಬರವೇಕೆ?

     ಮುಂದಿರುವ ಸಮಯ ಗುಟುರುಹಾಕುತ್ತ ಬಲಿಷ್ಠ ಎತ್ತಿನಂತೆ ಕಾಲ್ಕೆರೆದು ನಿಂತಿದೆ. ಅದರ ಬೆನ್ನ ಮೇಲೆ ಕಷ್ಟಗಳ ಸರಮಾಲೆಯಿದೆಯೋ.. ಸುಖದ ಮೂಟೆಯಿದೆಯೋ...? ಸಕಲವೂ ಅಸ್ಪಷ್ಟ.. ಆದರೆ ಅದು ಮುಂದಿನ ಕ್ಷಣವೇ ನನ್ನನ್ನು ಆಕ್ರಮಿಸುವುದಂತೂ ನಿಶ್ಚಿತ.

           ನಾನೇನು ಮೂರು ಕಾಸಿನ ಮೂರ್ಖನೆ? ಎರಡು ಕಾಸಿನ ಎಡಬಿಡಂಗಿಯೇ? ಒಂದು ಕಾಸಿನ ಆಲಿಸಿಯೇ? ಅಥವಾ ರೂಪಾಯಿಗಳಷ್ಟು ಲೆಕ್ಕಾಚಾರದ ಸದ್ಗುಣನೇ? ಉತ್ತರವಿಲ್ಲ.. ತಿಳಿದದ್ದೊಂದೇ ಅದು ನಾನು ಸೊನ್ನೆಯಂತೆ ಅನಿರ್ದಿಷ್ಟ...

     ಭವಿಷ್ಯದ ಯೋಜನೆಗಳ ಅಮಲು ತಲೆಗೇರಿದೆ. ಕೂಡಿಟ್ಟ ನೆನಪಿನ ಕೊಡ ಸೋರುತ್ತಿದೆ. ಕಣ್ಣಂಚಿನಿಂದ ತಪ್ಪಿಸಿಕೊಂಡ ಹನಿ ಜಾರಿ ಕೆಳಗಿಳಿಯುತ್ತಿದೆ. ಅರೇ..!! ಇದೇನು ಭಾವಾವೇಶವೋ... ಇದೇತಕ್ಕೆ ಉದ್ವೇಗವೋ.. ಜಗತ್ತಿನ ಭಾವನೆಗಳ ಭದ್ರ ನೆಲೆಗಟ್ಟಿನ ಮೇಲೆ ನಿಂತಿರುವವನು ನಾನೆಂದು ಪದೇಪದೇ ನೆನಪಿಸುತ್ತೆ..

          ರಾತ್ರಿ ಹತ್ತುಮೂವತ್ತಾಗಿತ್ತು ಆದರೆ ಕಣ್ಣುಗಳಿಗಿನ್ನೂ ಕತ್ತಲಾಗಿರಲಿಲ್ಲ. ಬಾರದ ನಿದ್ದೆಯನ್ನು ಬಣ್ಣದ ಕನಸುಗಳು ಆವರಿಸುತ್ತಿದ್ದವು. ಆ ಕ್ಷಣಕ್ಕೆ ಸರಿಯಾಗಿ ಮುಂದೆ ಉರಿಯುತ್ತಿದ್ದ ಮಂದ ಬೆಳಕಿನ ಮೊಂಬತ್ತಿಯ ಬೆಂಕಿಯನ್ನು ಕೀಟವೊಂದು ಸುತ್ತುತ್ತಾ ರೆಕ್ಕೆ ಸುಟ್ಟುಕೊಂಡು ಕೆಳಕ್ಕೆ ಬಿದ್ದು ಕಾಲುಗಳಿಂದ ಚಲಿಸುತ್ತಾ ಮಾಯವಾಯಿತು. ಅನುಭವಿಸುತ್ತಿದ್ದ ವಾಸ್ತವಿಕ ಹಾಗೂ ಕಾಲ್ಪನಿಕ ಪ್ರಪಂಚವೆಲ್ಲ ಮಾಯವಾಗಿ ಮಾಯಗಾರನಂತಹ ಯೋಚನೆಯೊಂದು ದಿಢೀರನೆ ಮಿಂಚಿಗಿಂತ ವೇಗವಾಗಿ ಮನ:ಪಟಲದಲ್ಲಿ ಹೊಳೆಯಿತು.

     ಬೆಂಕಿಯನ್ನು ಆರಿಸಲು ಪ್ರಯತ್ನಪಟ್ಟ ಕೀಟದಂತೆ, "ಬಿಡುವ ಮುನ್ನ ಬರವೇಕೆ" ಕೈಗೆತ್ತಿಕೊಂಡ ಯೋಜನೆಗಳಲ್ಲಿ ಪ್ರಯತ್ನಗಳದ್ದು. ಯತ್ನ ಸಫಲವಾದ ನಂತರದ ಕ್ಷಣಗಳಲ್ಲಿ ಜೀವನ ಬದಲಾಗಬಹುದು. ವಿಫಲವಾದರೆ ಇರುವ ಜೀವನದಲ್ಲಿ ಹೊಸದಾದ ಮಾರ್ಗಗಳ ಜೊತೆಗೆ ತಿರುವುಗಳು ಬರಬಹುದು. ಬರಡು ಭೂಮಿಯಲ್ಲಿ ಚಿಗುರುಗಳನ್ನು ಕಾಣಲಾದೀತೇ?. ನಡೆಯಬೇಕಾಗಿರುವುದು ಹಾಗೂ ನಡೆಸಲೇಬೇಕಾಗಿರುವುದು ನಾವು ಹಾಗೂ ನಮ್ಮ ಪ್ರಯತ್ನಗಳಾಗಿರುವಾಗ ಅವುಗಳಿಗೇ ಬರ ಉಂಟಾದರೆ ನಾಳೆಯ ದಿನ ಹಾಗೂ ಅದರ ದಾರಿಗಳು ಚಿಗುರೊಡೆಯಲು ಹೇಗೆ ಸಾಧ್ಯ? 

          ಬದುಕಿನಲ್ಲಿ ಬರಡು ಸಮಸ್ಯೆಗಳ ಮೇಲೆ ಪ್ರಯತ್ನಗಳ ಮಳೆ ಸುರಿಸುವುದರ ಅವಶ್ಯಕತೆ ಖಂಡಿತ ಇದೆ. ಆತ್ಮವಿಶ್ವಾಸವೆಂಬ ಸಮುದ್ರದ ನೀರನ್ನು ಮನಸ್ಸೆಂಬ ಸೂರ್ಯನು ಆರಿಸಲು ಬಿಟ್ಟುಬಿಡಬೇಕು. ಬಂಗಾರದ ಬೆಳೆಯ ಫಸಲು ನಾಳೆಯಲ್ಲದಿದ್ದರೊಂದುದಿನ ಅವಶ್ಯವಾಗಿ ಬಂದೇ ಬರುತ್ತೆ.


Comments

Popular posts from this blog

ಅನಿಶ್ಚಿತ

ಸಮಯ ಸಮಸ್ಯೆ?

ನಗುವರಿಯದ ಮುಖ..

ಆದ್ಯತೆ ( priority )

ಅಮ್ಮ

ಮರುಳು ಜೀವನ

ಕೆಂಪು ಮಣ್ಣಿನ ನೆಲ

ಮನು ಮತ್ತು ತಾತ

ಚಂಚಲ