ಕುರುಡು ಮನ

ಅಳಬೇಕೋ, ನಗಬೇಕೋ, ಕ್ರೋಧಗೊಳ್ಳಬೇಕೋ, ವಿಷಾದದಿಂದ ಪರಿಸ್ಥಿತಿಯನ್ನು ಹಳಿಯಬೇಕೋ ಏನೂ ತಿಳಿಯುತ್ತಿಲ್ಲ.. ಎಷ್ಟು ನಿಸ್ಸಹಾಯಕ ಪರಿಸ್ಥಿತಿ.. ಈ ಅಸಹಾಯಕತೆಯ ದುಃಖವು ಮನಸ್ಸಿನ ನೋವಾಗಿ ಕಣ್ಣಹನಿ ರೂಪವನ್ನು ಪಡೆಯುತ್ತಿದೆ ಎನಿಸುತ್ತಿದೆ..
    ನಾನು ನನ್ನನ್ನು ಪ್ರಶ್ನಿಸಿಕೊಳ್ಳಬೇಕೋ, ಅಥವಾ ಸರಿ ಯಾವುದೆಂದು ಇತರರನ್ನು ಒಟ್ಟುಗೂಡಿಸಿ ವಾದ ಮಾಡಬೇಕೋ...  ಹೀನಾಯ ಪರಿಸ್ಥಿತಿಯು ಕಣ್ಣಮುಂದೆಯೇ ನಡೆಯುತ್ತಿರುವುದನ್ನು ನೋಡುತ್ತಿದ್ದರು ಸುಮ್ಮನಾಗಿರುವಂತಾಗಿದೆಯಲ್ಲಾ... ಎಂತಹ ಪಾಪದ ಜನ್ಮವಿದು...
     ಒಬ್ಬರಿಗೊಬ್ಬರು ಮಿಡಿಯುವಂತಹ ಸ್ನೇಹವಿಲ್ಲ.. ಇಬ್ಬರು ಒಂದಾಗುವಂತಹ ಪ್ರೀತಿಯಂತೂ ಇಲ್ಲವೇ ಇಲ್ಲ.. ಶುದ್ಧವಾದ ಸಹಜ ಗೆಳೆತನ ವಷ್ಟೇ... ಆದರೆ ಗೆಳತಿಯ ಬಗೆಗಿನ ಅಸಹ್ಯವಾದ ಮಾತುಗಳಿಗಾಗಿ ಮನವು ಇಂದೇಕೋ ವಿಚಲಿತಗೊಂಡು ನಿಂತಿದೆ..
   ಗಂಡು ಜನ್ಮ ಪಡೆದು ಯುವಕನಾದ ಮಾತ್ರಕ್ಕೆ ಅನ್ಯ ಸ್ತ್ರೀಯ ಬಗೆಗಿನ ನಮ್ಮ ದೃಷ್ಟಿ ಏಕೆ ನಮ್ಮ ಆಪ್ತರ ಮೇಲಿನ ದೃಷ್ಟಿಗಿಂತ ಭಿನ್ನವಾಗಿ ಬಿಡುವುದು?? ಅವರೇನು ತಪ್ಪೆಸಗಿದರು? ಯಾರೊಬ್ಬರೂ ತಮ್ಮ ದೇಹದ ಸ್ವಯಂ ನಿರ್ಮಾತೃ ಗಳೇನಲ್ಲ. ಪ್ರತಿಯೊಬ್ಬರ ಶರೀರವು ಭಿನ್ನವಾಗಿ ದೇವರಿಂದ ಕೊಡಲ್ಪಟ್ಟಿದ್ದೇ ಆಗಿರುತ್ತದೆ. ಇವುಗಳ ಅರಿವಿದ್ದರೂ ಅಸಹ್ಯವಾಗಿ ,ಅಸಭ್ಯವಾಗಿ ಅವಳ ದೇಹದ ಅಂಗಾಂಗಗಳ ವಿವರಣೆಯ ಅಗತ್ಯವೇನು? ಅವಳು ಇರುವಲ್ಲಿ ನಿಮ್ಮ ಅಮ್ಮನೋ ಸಹೋದರಿಯನ್ನೋ ಅಥವಾ ನಿಮ್ಮನ್ನೋ ಕಲ್ಪಿಸಿಕೊಂಡು ನಿರ್ಮಲ ಮನಸ್ಸಿನಿಂದ ಒಮ್ಮೆ ಯೋಚಿಸಿ ನೋಡಿ ಯಾವಾಗಲೂ ಗೋಚರಿಸುವ ಸತ್ಯವು ನಿಮ್ಮೆದುರಿಗೆ ನಿಮ್ಮ ಗುಣ ನಡತೆಯ ಚಾರಿತ್ರ್ಯದ ಸಂಸ್ಕೃತಿಯ ಪ್ರದರ್ಶನವನ್ನು ನೀಡುತ್ತದೆ.ನಿಮ್ಮೊಂದಿಗೆ ನೀವೊಂದೇ  ಕೆಟ್ಟವರಾಗಿ ಇರಲಾರಿರಿ.. ಯೋಚಿಸಿ ನೋಡಿ ಒಮ್ಮೆ ಪ್ರಪಂಚ ನೋಡುವುದು ಜನ್ಮ ಕೊಟ್ಟ ಅಪ್ಪ ಅಮ್ಮನ ಕಡೆಗೂ ಆಗಿರುತ್ತದೆ. ನಿಮ್ಮಂತಹವರ ದುರ್ನಡತೆಯಿಂದೇಕೆ ಪಾಪವನ್ನು ಅರಿಯದ ಅವರು ನೋವನ್ನುಣ್ಣಬೇಕು.... ನಿಮ್ಮ ದುರ್ಯೋಚನೆಯ  ಅರಿವಿಲ್ಲದ ನಿಮ್ಮ ಹೆತ್ತವರು ನಿಮಗಿಂತ ಹೆಚ್ಚು ದುಃಖಿಸುವಂತೆ ಆಗಬಹುದು.. ನೀವು ವ್ಯಂಗ್ಯವಾಡಿದ ವಿಷಯ ಆ ಹುಡುಗಿಗೆ ತಿಳಿದರೆ ಪರಿಣಾಮ ಏನಾಗಬಹುದು ಎಂದು ಎಂದಾದರೂ ಯೋಚಿಸಿದ್ದೀರಾ ? ಮರ್ಯಾದೆ ಇಲ್ಲದ ಮುಖಕ್ಕೆ ಅಂತಹ ಯೋಜನೆಗಳು ಎಲ್ಲಿಂದ ತಾನೇ ಬರಲು ಸಾಧ್ಯವಾದೀತು..
 
ಮೃದು ಮನಸ್ಸಿನ ಅವಳು ಯೋಚಿಸುವಳು, ಅತಿಯಾಗಿ ದುಃಖಿಸುವಳು. ನಾನೇನು ತಪ್ಪು ಮಾಡಿ ಈ ಪ್ರಪಂಚದಲ್ಲಿ ಹುಟ್ಟಿದ್ದೇನೆ? ನನ್ನ ದೇಹವನ್ನು ನಾನೇ ಸ್ವತಃ ವಿರೂಪಗೊಳಿಸಿಕೊಂಡು ಬಿಡಲೇನು... ನಿಸ್ಸಹಾಯಕತೆಯಿಂದ ನಾನು ಅತ್ತು ಪ್ರಯೋಜನವೇನು.. ನನ್ನ ಕರ್ಮಫಲವನ್ನು ಬಯ್ದುಕೊಳ್ಳಲೋ? ಅಥವಾ ನನ್ನ ದೇಹವನ್ನು ಬಯ್ದುಕೊಳ್ಳಲೋ?? ಎಂದೆಲ್ಲಾ ಯೋಚನೆಗೆ ಒಳಗಾಗುವಳು .... ನಗುವಿನಿಂದ ಸಿಂಗರಿಸಿಕೊಂಡು ಇರಬೇಕಿದ್ದ ಅವಳ ಮುಖವು ವಿಷಾದದ ಛಾಯೆಯಿಂದ ಆವರಿಸಲ್ಪಡುತ್ತದೆ. ಸ್ವಚ್ಛಂದವಾಗಿ ಬಾನಲ್ಲಿ ಹಾರಾಡುವ ಹಕ್ಕಿಯಂತೆ ಸ್ವಾತಂತ್ರ್ಯವನ್ನು ಅನುಭವಿಸಬೇಕಿದ್ದ ಅವಳು ನಿಮ್ಮ ಕೆಟ್ಟದೃಷ್ಟಿಯ ಮಾತ್ರಕ್ಕೆ ತನ್ನನ್ನು ಬಂಧಿಯನ್ನಾಗಿ ಮಾಡಿಕೊಳ್ಳುವಳು..

ಅವಳ ಮನಸ್ಸಿನ ಆರ್ತ ದುಃಖದ ಬಗ್ಗೆಯೂ ಒಂದು ಕ್ಷಣ ಗಮನಹರಿಸಿ.. ಹೊಲಸು ಪೂರಿತ ಕಠೋರ ಮನವೂ ಕೂಡ ಭಾಷ್ಪ ಪೂರಿತವಾಗದೇ ಇರಲಾರದು.. ದೃಷ್ಟಿಯನ್ನು ಒಮ್ಮೆ ಸಹಜವಾಗಿ ಹರಿಸಿ ಮಳೆಯಂತೆ.... ಎಲ್ಲವೂ ಶುದ್ಧವಾಗಿಯೇ ಗೋಚರಿಸುವುದು. ನಿಮ್ಮ ಮನದ ಕೊಳೆಯನ್ನು ನಾಶಮಾಡಿಕೊಳ್ಳಿ. ನಿಮ್ಮ ಅಸಹ್ಯ,ಲೈಂಗಿಕ ದೃಷ್ಟಿಯು ಬೇರೆಯವರಿಗೆ ಯಾವ ತೊಂದರೆಯನ್ನೂ ಉಂಟು ಮಾಡದಂತೆ ನೋಡಿಕೊಳ್ಳಿ. ನಿಮ್ಮೊಂದಿಗೆ ನಿಮ್ಮ ಸುತ್ತಲಿನ ಪರಿಸರವಾಸಿಗಳೂ ಕೂಡ ಖುಷಿಯಾಗಿರಲು ಜವಾಬ್ದಾರಿಯಿಂದ ಸಚ್ಚಾರಿತ್ರ್ಯರಾಗಿ ವರ್ತಿಸಿ..

"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾ:"


Comments

Popular posts from this blog

ಅನಿಶ್ಚಿತ

ಸಮಯ ಸಮಸ್ಯೆ?

ನಗುವರಿಯದ ಮುಖ..

ಆದ್ಯತೆ ( priority )

ಅಮ್ಮ

ಮರುಳು ಜೀವನ

ಕೆಂಪು ಮಣ್ಣಿನ ನೆಲ

ಮನು ಮತ್ತು ತಾತ

ಚಂಚಲ